ಬಲ್ಮಠ ಪ.ಪೂ. ಕಾಲೇಜಿನಲ್ಲಿ ವಾರ್ಷಿಕೋತ್ಸವ
ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಂಘದ ಅಧ್ಯಕ್ಷ ವೇದವ್ಯಾಸ ಕಾಮತ್ ಅವರು ದೀಪ ಬೆಳಗಿಸಿ ಶುಭ ಹಾರೈಸಿ, ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯ ಪ್ರತಿಭೆಗಳನ್ನು ಹೊಂದಿದ್ದು, ಅವಕಾಶಗಳನ್ನು ಉಪಯೋಗಿಸಿಕೊಂಡು ಕಠಿಣ ಪರಿಶ್ರಮದಿಂದ ಏಕಾಗ್ರತೆಯಿಂದ ಪ್ರಯತ್ನಪಟ್ಟು ಸಾಧನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ 2025-26ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಕಲಾ ವಿಭಾಗದಲ್ಲಿ 7ನೇ ಸ್ಥಾನ ಪಡೆದಿರುವ ಸ್ವಸ್ತಿಕಾ ರೈ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಗದೀಶ ಬಾಳ ಮಾತನಾಡಿ, ಹದಿಹರೆಯದ ಹೆಣ್ಮಕ್ಕಳ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಹೇಳಿ, ಊಟದ ಸಮಯದಲ್ಲಿ ಪ್ಯಾಕೆಟ್ ಫುಡ್‌ಗಳನ್ನು ಪ್ರಧಾನ ಆಹಾರವಾಗಿ ಸೇವಿಸಿದರೆ ಆರೋಗ್ಯ ಹಾಳಾಗುವುದರ ಜೊತೆಗೆ ಸೌಂದರ್ಯವೂ ಕೆಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ವನಿತ ದೇವಾಡಿಗ ವಾರ್ಷಿಕ ವರದಿ ವಾಚನ ಮಾಡಿದರು. ಮುಖ್ಯ ಅತಿಥಿಗಳಾದ ಹೇಮಂತ್ ಪೈ ಹಾಗೂ ತೇಜೋಮಯ ಇವರು ಶುಭ ಹಾರೈಸಿದರು.
ಶಾಲಿನಿ ಪೈ, ಹಿರಿಯ ಉಪನ್ಯಾಸಕ ಉಮೇಶ್ ಕೆ.ಆರ್., ವಿದ್ಯಾರ್ಥಿ ನಾಯಕಿ ಖತೀಜತ್ ಆರೂಫ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ಯಶೋಧ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೂಲಿಯಾನ ಡಿಸೋಜ ವಂದಿಸಿದರು.