‘ರಾಷ್ಟ್ರೀಯ ಐದನೇ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್’ ಸ್ಪರ್ಧೆ
ಮಂಗಳೂರು: ಮೈ ನಡುಗುವ ಚಳಿಯಲ್ಲಿ, ನೀರು ಹೆಪ್ಪುಗಟ್ಟಿದಂತೆ ತೋರುವ ವಾತಾವರಣದಲ್ಲಿ ಪುರುಷರ ಎ ವಿಭಾಗದ 800 ಮೀಟರ್ಸ್ ಬೈಫಿನ್ ಸ್ಪರ್ಧೆಯ ಸೀಟಿ ಮೊಳಗುವುದರೊಂದಿಗೆ ರಾಷ್ಟ್ರೀಯ ಐದನೇ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್‌ನ ಸ್ಪರ್ಧೆಗಳಿಗೆ ನಗರದ ಎಮ್ಮೆಕೆರೆ ಈಜುಕೊಳದಲ್ಲಿ ಶನಿವಾರ ಚಾಲನೆ ದೊರಕಿತು.
ವಿಒನ್ ಈಜು ಕೇಂದ್ರ, ಭಾರತ ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಮತ್ತು ಕರ್ನಾಟಕ ಫಿನ್‌ಸ್ವಿಮ್ಮಿಂಗ್ ಸಂಸ್ಥೆ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಮುಂಜಾನೆ ಆರಂಭಗೊಂಡ ಮೊದಲ ಸ್ಪರ್ಧೆಯಲ್ಲಿ ಗೋವಾದ ತನ್ಮಯ್ ಹೇಮಂತ್ ಮಿಂಚಿದರು. 8 ನಿಮಿಷ 50.19 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಚಿನ್ನದ ಪದಕ ಗೆದ್ದುಕೊಂಡರು. ಮೊದಲ ಸ್ಪರ್ಧೆಯಲ್ಲೇ ಕರ್ನಾಟಕವೂ ಖಾತೆ ತೆರೆಯಿತು. ಮಹಮ್ಮದ್ ಅಬ್ದುಲ್ ಬಾಸಿತ್ 8 ನಿ 52.85 ಸೆಕೆಂಡುಗಳ ಸಾಧನೆಯೊಂದಿಗೆ ಬೆಳ್ಳಿ ಪದಕ ಗಳಿಸಿದರು. ಬಾಸಿತ್‌ಗೆ ಭಾರಿ ಪೈಪೋಟಿ ನೀಡಿದ ಒಡಿಶಾದ ಸಂಶುಮನ್ ಕಂಚಿನ ಪದಕ ಗೆದ್ದುಕೊಂಡರು.
ಜೂನಿಯರ್ ಬಾಲಕಿಯರ ಬಿ ವಿಭಾಗದ 400 ಮೀಟರ್ಸ್ ಬೈಫಿನ್ ಎರಡನೇ ಸ್ಪರ್ಧೆಯಾಗಿತ್ತು. ಇದರಲ್ಲೂ ತುರುಸಿನ ಪೈಪೋಟಿ ಕಂಡುಬಂತು. 50 ಮೀಟರ್ಸ್ ಸರ್ಫೇಸ್ ಸ್ವಿಮ್ ಮೂಲಕ ಚಾಂಪಿಯನ್‌ಷಿಪ್ ಮತ್ತಷ್ಟು ಚುರುಕು ಪಡೆದುಕೊಂಡಿತು. ಕರ್ನಾಟಕದಲ್ಲಿ ಮೊದಲ ಬಾರಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ನಾನಾ ಭಾಗಗಳ ಈಜುಪಟುಗಳು ಕಾಲಿಗೆ ರೆಕ್ಕೆ ಕಟ್ಟಿದಂತೆ ಫಿನ್‌ಗಳನ್ನು ಬಿಗಿದುಕೊಂಡು ನೀರಿನಲ್ಲಿ ಮೀನಿನಂತೆ ಓಲಾಡಿ ಸಂಜೆಗತ್ತಲಲ್ಲಿ ಮತ್ತೆ ಚಳಿ ಆವರಿಸಿಕೊಳ್ಳುವ ವರೆಗೂ ಕ್ರೀಡಾಪ್ರಿಯರಿಗೆ ಮುದ ನೀಡಿದರು.
ಪೂವಮ್ಮ, ಧನಲಕ್ಷ್ಮಿ ಭಾಗಿ:
ಔಪಚಾರಿಕ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಯನ್ ಅಥ್ಲೀಟ್ ಎಂ.ಆರ್ ಪೂವಮ್ಮ ಮತ್ತು ಈಚೆಗೆ ಮುಕ್ತಾಯಗೊಂಡ ಮಹಿಳೆಯರ ವಿಶ್ವಕಪ್ ಕಬಡ್ಡಿಯಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದ ಧನಲಕ್ಷ್ಮಿ ಪೂಜಾರಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಧನಲಕ್ಷ್ಮಿ ಕ್ರೀಡೆಯಲ್ಲಿ ಛಲ ಮುಖ್ಯ. ಎಂಥ ಪರಿಸ್ಥಿತಿಯಲ್ಲೂ ಹೋರಾಟವನ್ನು ನಿಲ್ಲಿಸಬಾರದು. ಕ್ರೀಡಾ ಜೀವನದಲ್ಲೂ ಅಷ್ಟೇ, ಸೋಲು ಕಂಡಾಗ ನಿರಾಸೆಗೆ ಒಳಗಾಗದೆ ಸತತವಾಗಿ ಹೋರಾಡಿದರೆ ಯಶಸ್ಸು ಸಿಕ್ಕಿಯೇ ಸಿಗುತ್ತದೆ ಎಂದರು.
ಚಾಂಪಿಯನ್‌ಷಿಪ್‌ಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಭಾರತ ಈಜು ತಂಡದ ಕೋಚ್ ಆಗಿದ್ದ ತಪನ್ ಕುಮಾರ್ ಪ್ರಾಣಿಗ್ರಹಿ ‘ಅಂಡರ್ ವಾಟರ್ ಸ್ವಿಮ್ಮಿಂಗ್ ಜಗತ್ತಿನಾದ್ಯಂತ ಹೆಸರು ಗಳಿಸುತ್ತಿದ್ದು ಭಾರತದಲ್ಲಿ ಈಚೆಗೆ ಪ್ರವರ್ಧಮಾನಕ್ಕೆ ಬಂದಿದೆ. ಇದಕ್ಕೆ ಈಗ ಇರುವ ಸಂಘ?ಸಂಸ್ಥೆಗಳ ಜೊತೆಯಲ್ಲಿ ಮತ್ತೊಂದು ವೇದಿಕೆ ಸಿದ್ದಗೊಂಡು ಹೊಸ ತಲೆಮಾರಿನವರಿಗೆ ತರಬೇತಿ ನಿಡುವ ವ್ಯವಸ್ಥೆ ಆಗಬೇಕು ಎಂದರು.
ಅಂಡರ್‌ವಾಟರ್ ಈಜು ಫೆಡರೇಷನ್‌ನ ಹಿಮಾಚಲ ಪ್ರದೇಶ ಘಟಕದ ಅಧ್ಯಕ್ಷ ಹಿಮಾಂಶು ಸೂದ್, ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್ ನಿರ್ದೇಶಕ ಆರ್.ಕೆ ಸಿಂಗ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್, ಅದಾನಿ ಗ್ರೂಪ್‌ನ ದಕ್ಷಿಣ ವಲಯ ಅಧ್ಯಕ್ಷ ಕಿಶೋರ್ ಆಳ್ವ,
ಬಿಜೆಪಿ ಮುಖಂಡ ದಿವಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೊಜ, ಮಂಗಳೂರು ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕ ಅರುಣಪ್ರಭ, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್, ವಿಒನ್ ಈಜು ಕೇಂದ್ರದ ನವೀನ್ ಮತ್ತು ರೂಪಾ ಪಾಲ್ಗೊಂಡಿದ್ದರು.
ಕ್ರೀಡಾಪಟುಗಳಿಗೆ ಸನ್ಮಾನ, ಅಗೌರವ:
ಉದ್ಘಾಟನಾ ಸಮಾರಂಭದಲ್ಲಿ ಎಂ.ಆರ್.ಪೂವಮ್ಮ ಮತ್ತು ಧನಲಕ್ಷ್ಮಿ ಅವರನ್ನು ಗೌರವಿಸಲಾಯಿತಾದರೂ ಅಗೌರವವನ್ನೂ ತೋರಿಸಲಾಯಿತು. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸ್ಥಳೀಯ ಬಿಜೆಪಿ ಮುಖಂಡರನ್ನೆಲ್ಲ ಸ್ವಾಗತಿಸಿದ ನಂತರವಷ್ಟೇ ದೇಶಕ್ಕೆ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದುಕೊಟ್ಟ ಸ್ಪ್ರಿಂಟ್ ತಾರೆ ಪೂವಮ್ಮ ಅವರ ಹೆಸರು ಹೇಳಲಾಯಿತು.
ಸನ್ಮಾನದ ಪೂವಮ್ಮ ವೇದಿಕೆ ಬಿಟ್ಟು ತೆರಳಿದರು. ನಂತರ ಧನಲಕ್ಷ್ಮಿ ಅವರನ್ನು ಮಾತನಾಡಲು ಕರೆಯಲಾಯಿತು. ಆದರೆ ಅವರು ಎದ್ದುನಿಲ್ಲುವಷ್ಟರಲ್ಲಿ ಅಧಿಕಾರಿಯೊಬ್ಬರು ಹೊರಟರು. ಸಂಘಟಕರು ಅಧಿಕಾರಿ ಮತ್ತು ಶಾಸಕರ ಸುತ್ತ ಸೇರಿದರು. ಧನಲಕ್ಷ್ಮಿ ಸ್ವಲ್ಪ ಹೊತ್ತು ನಿಂತುಕೊಂಡೇ ಇದ್ದರು. ನಂತರ ಕೋಚ್ ತಪನ್ ಕುಮಾರ್ ಅವರನ್ನು ಮಾತನಾಡಲು ಆಹ್ವಾನಿಸಲಾಯಿತು. ಅವರ ಮಾತು ಮುಗಿಯುವಷ್ಟರಲ್ಲಿ ಸಂಘಟಕರು ವೇದಿಕೆಯ ಕೆಳಗೆ ಶಾಸಕರ ಜೊತೆ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದರು. ಧನಲಕ್ಷ್ಮಿ ವೇದಿಕೆ ಮೇಲೆ ನಿಂತುಕೊಂಡೇ ಇದ್ದರು. ‘ಪರಿಸ್ಥಿತಿ ತಿಳಿಯಾದ’ ನಂತರ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಎರಡನೇ ವಾಕ್ಯಗಳಲ್ಲಿ ಅವರು ಮಾತು ಮುಗಿಸಿ ಹೊರಟರು.