ಪ್ರಭಾಕರ ಭಟ್ ಪ್ರಕರಣ: ಅರ್ಜಿ ಪುರಸ್ಕಾರ
ಮಂಗಳೂರು: ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 338-339 ಅಡಿ ಅವಕಾಶ ಕೋರಿ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರು ಹಿರಿಯ ವಕೀಲ ಸತೀಶನ್ ಅವರ ಮೂಲಕ ಸಲ್ಲಿಸಿರುವ ಅರ್ಜಿಯನ್ನು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಪುರಸ್ಕರಿಸಿದೆ.
ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅವರ ಬಿಎನ್‌ಎಸ್‌ಎಸ್ ಸೆಕ್ಷನ್ 338-339 ಅರ್ಜಿ ಪುರಸ್ಕೃತಗೊಂಡಿರುವುದರಿಂದ ಅವರು ಪ್ರಭಾಕರ ಭಟ್ ಸಲ್ಲಿಸಿರುವ ಜಾಮೀನು ಅರ್ಜಿಗೆ ವಿರುದ್ಧವಾಗಿ ವಾದ ಮಂಡಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದೀಗ ಕಲ್ಲಡ್ಕ ಭಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 05 ಕ್ಕೆ ಮುಂದೂಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಬಿಎನ್‌ಎಸ್-2023ರ ಸೆಕ್ಷನ್ 79, 196, 299, 302 ಹಾಗೂ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆರೋಪಿ ಪ್ರಭಾಕರ ಭಟ್ ಬಂಧನದ ಭೀತಿಯಿಂದ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಅಲ್ಲಿಸಿದ್ದರು.
ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29ಕ್ಕೆ ಮುಂದೂಡಿತ್ತು.