ಎಂಸಿಎಫ್ ಹೆಸರು ಉಳಿಸಿ: ಮನವಿ ಸಲ್ಲಿಕೆ
ಮ್ಯಾಕ್ಸಿಮ್ ಆಲ್ಫ್ರೆಡ್ ಡಿಸೋಜಾ ಅವರು ತಮ್ಮ ಆರಂಭಿಕ ಪ್ರಸ್ತಾವನೆಯಲ್ಲಿ 50 ವರ್ಷಗಳಿಂದ ಅಸ್ತಿತ್ವದಲ್ಲಿರುವ, ಸಾವಿರಾರು ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡುತ್ತಿದ್ದ ಮತ್ತು ಇಲ್ಲಿನ ನೆಲದೊಂದಿಗೆ, ಸಮುದಾಯದೊಂದಿಗೆ ಅವಿನಾನುಭವ ಸಂಬಂಧ ಹೊಂದಿದ್ದ ಎಂಸಿಎಫ್ ಹೆಸರನ್ನು ರಾತ್ರೋರಾತ್ರಿ ಅಳಿಸಿ ಅದರ ಜಾಗದಲ್ಲಿ ಪಾರಾದೀಪ್ ಫಾಸ್ಫೇಟ್ಸ್ ಹೆಸರನ್ನು ಹೇರಿರುವುದರ ಬಗ್ಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದರು.
ಇದು ಕೇವಲ ಕೆಲ ಜನರ ಮನಸ್ಸಿನ ನೋವು ಅಲ್ಲ. ಇದು ಇಲ್ಲಿನ ಸ್ಥಳೀಯ ಸಮುದಾಯ, ರಾಜ್ಯದ ಜನತೆಯ, ಹಿಂದಿನ ಮತ್ತು ಪ್ರಸ್ತುತ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ನೋವಿನ ಸಂಗತಿಯಾಗಿದೆ. ಕೈಗಾರಿಕಾ ಸಂಸ್ಥೆಯೊಂದು ತಾನು ಕಾರ್ಯಚರಿಸುವ ಪ್ರದೇಶದ ಸಮುದಾಯದಿಂದ ಪ್ರತ್ಯೇಕತೆಯನ್ನು ಬಯಸಲು ಸಾಧ್ಯವಿಲ್ಲ. ಹೆಸರು ಮರುಸ್ಥಾಪನೆಯಿಂದ ಸಂಸ್ಥೆ ಮತ್ತು ಸಮುದಾಯ ಜೊತೆಯಾಗಿ ಮುನ್ನಡೆಯಬಹುದೆಂದು ಒತ್ತಿ ಹೇಳಿದರು.
ಶಿವರಾಂ ಶೆಟ್ಟಿಯವರು ಮಂಗಳೂರಿನಲ್ಲಿ ಇಲ್ಲಿಯ ಹೂಡಿಕೆದಾರರಿಂದ ಸ್ಥಾಪಿತವಾದ ಸಂಸ್ಥೆಯ ಆಡಳಿತ ಹೊರಗಿನ ಇನ್ನೊಂದು ಸಂಸ್ಥೆಯ ಸಂಪೂರ್ಣ ನಿಯಂತ್ರಣಕ್ಕೆ ಹೋದರೆ ಸ್ಥಳೀಯ ಯುವ ಜನರು ಉದ್ಯೋಗ ವಂಚಿತರಾಗಲಿದ್ದಾರೆ. ಹೆಸರು ಬದಲಾವಣೆ ಅದನ್ನು ಇನ್ನಷ್ಟು ಜನರಿಂದ ದೂರ ಮಾಡಲಿದೆ ನಮಗೆಲ್ಲರಿಗೂ ಎಂಸಿಎಫ್ ಬದುಕನ್ನು ರೂಪಿಸಿದ ದ್ಯೋತಕ. ಅದರ ಒಳ್ಳೆಯತನವನ್ನೇ ನಾವು ಬಯಸುವುದು ಎಂದು ತಮ್ಮ ಅನಿಸಿಕೆಯನ್ನು ಪ್ರಚುರ ಪಡಿಸಿ ಆದಷ್ಟು ಬೇಗ ತಪ್ಪನ್ನು ಸರಿಪಡಿಸಬೇಕೆಂದು ಕೇಳಿಕೊಂಡರು.
ಸಂಸ್ಥೆಯ ಮೊದಲ ಬ್ಯಾಚ್ ಉದ್ಯೋಗಿ ವೈ.ಎಂ. ದೇವದಾಸ್, ಎಂಸಿಎಫ್‌ನ ಪರಂಪರೆ ಮತ್ತು ಆ ಹೆಸರಿನೊಡನೆ ಬೆಳೆದ ಆಳವಾದ ನಂಟಿನ ಬಗ್ಗೆ ವಿವರಿಸಿದರು.
ಮಾಜಿ ಉದ್ಯೋಗಿಗಳ ನಿವೇದನೆಗಳನ್ನು ತಾಳ್ಮೆಯಿಂದ ಆಲಿಸಿದ ಊಖ-ಉಒ ಚೇತನ್ ಮೆಂಡೋನ್ಸ ಅವರು ಮನವಿ ಪತ್ರ ಸ್ವೀಕರಿಸಿ ಅತ್ಯಂತ ಶೀಘ್ರವಾಗಿ ಸಂಸ್ಥೆಯ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆಯಿತ್ತರು.
‘ಎಂಸಿಎಫ್ ಹೆಸರು ಉಳಿಸಿ’ ವೇದಿಕೆಯ ಪರವಾಗಿ ಮ್ಯಾಕ್ಸಿಮ್ ಡಿಸೋಜಾ, ಶಿವರಾಮ ಶೆಟ್ಟಿ, ದಯಾನಂದ ಶೆಟ್ಟಿ, ಮೊಹಮ್ಮದ್ ಆಲಿ, ದೇವದಾಸ್ ವೈ.ಎಂ. ಮತ್ತು ಸಾಯಿನಾಥ್ ಸಾವಂತ್ ಉಪಸ್ಥಿತರಿದ್ದರು.