ವೇಣುಗೋಪಾಲ್ ಎದುರು ಕಾಂಗ್ರೆಸ್ ಬಣ ಶಕ್ತಿ ಪ್ರದರ್ಶನ: ವಿಮಾನ ನಿಲ್ದಾಣದಲ್ಲಿ ಸಿದ್ದು, ಡಿಕೆ ಪರ ಘೋಷಣೆ
ಈ ಸಂದರ್ಭ ತಳ್ಳಾಟ, ನೂಕಾಟ ನಡೆದು ನೆರೆದಿದ್ದ ಕಾರ್ಯಕರ್ತರನ್ನು ಚದುರಿಸಿ ವೇಣುಗೋಪಾಲ್‌ಗೆ ದಾರಿ ಮಾಡಿಕೊಡಲು ಪೊಲೀಸರು ಶ್ರಮಪಟ್ಟರು. ಈ ಸಂದರ್ಭ ಮಾಧ್ಯಮದವರು ವೇಣುಗೋಪಾಲ್ ಅವರನ್ನು ಮಾತನಾಡಿಸಲು ಮುಂದಾದಾಗ ಕೊಣಾಜೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡುತ್ತೇನೆ ಎಂದಷ್ಟೇ ಹೇಳಿ ನಿರ್ಗಮಿಸಿದರು.
ಸಿದ್ದು ಪರ ಘೋಷಣೆ..
ಕೆಲವೇ ಸಮಯಗಳ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದರು. ಅವರೊಂದಿಗೆ ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು. ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಹೊರಬಂದು ವಾಹನದತ್ತ ಸಾಗುತ್ತಿದ್ದಂತೆ, ಸಿದ್ದರಾಮಯ್ಯ ಪರ ಕಾರ್ಯಕರ್ತರು “ಸಿದ್ದು.. ಸಿದ್ದು.. ಪೂರ್ಣಾವಧಿ ಸಿದ್ದು’ ಘೋಷಣೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಸಿದ್ದರಾಮಯ್ಯ ಅವರು ಕೈ ಸನ್ನೆ ಮೂಲಕ ಘೋಷಣೆ ಬೇಡವೆಂದರೂ ಘೋಷಣೆ ಮುಂದುವರೆದಿತ್ತು.
ಡಿಕೆಶಿ ಮತ್ತು ಸಿದ್ದರಾಮಯ್ಯ ಪರ ಕಾರ್ಯಕರ್ತರ ಎರಡು ಬಣ ಶಕ್ತಿ ಪ್ರದರ್ಶನದಿಂದ ಮಂಗಳೂರು ವಿಮಾನ ನಿಲ್ದಾಣ ರಾಜ್ಯದ ಕಾಂಗ್ರೆಸ್ ಒಳ ರಾಜಕಾರಣದ ನೇರ ಸಾಕ್ಷಿ ನೀಡಿದಂತಿತ್ತು. ಮೊದಲು ಡಿಕೆಶಿ ಪರ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆ ನಡೆಸಿದರೆ, ನಂತರ ಸಿದ್ದರಾಮಯ್ಯ ಪರ ಬೆಂಬಲಿಗರು ಸಮಾನ ಶಕ್ತಿಯಲ್ಲಿ ಪ್ರತಿಘೋಷಣೆ ನಡೆಸಿದರು. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಪರಸ್ಪರ ಬಣ ಸ್ಪರ್ಧೆ ಮತ್ತು ಒಳರಾಜಕಾರಣದ ಪ್ರಭಾವವನ್ನು ತೆರೆದ ಪರದೆಯಲ್ಲಿ ಬಿಂಬಿಸಿದಂತಿತ್ತು.
ಡಿ.ಕೆ. ಮುಖ್ಯಮಂತ್ರಿಯಾದರೆ ಅತೀ ಹೆಚ್ಚು ಸಂತೋಷ...
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ‘ಕೆ.ಸಿ.ವೇಣುಗೋಪಾಲ್ ಅವರು ಕಾಂಗ್ರೆಸ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಆಗಮಿಸಿದ್ದಾರೆ. ಆದ್ದರಿಂದ ನಾವು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಘೋಷಣೆ ಮಾಡಿದ್ದೇವೆ. ನಮಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೂ ನಾಯಕರೇ. ಇದರಲ್ಲಿ ಬೇರೆ ಅರ್ಥವಿಲ್ಲ. ಸಿದ್ದರಾಮಯ್ಯ ಅವರು ನಾಡು ಕಂಡ ಅದ್ಭುತ ವ್ಯಕ್ತಿ. ಆದರೆ ಅಧಿಕಾರ ಹಂಚಿಕೆಯಾಗಿ ಡಿಕೆಶಿ ಮುಖ್ಯಮಂತ್ರಿ ಆಗುವುದಾದರೆ ನಾವು ಅತೀ ಹೆಚ್ಚು ಸಂತೋಷ ಪಡುತ್ತೇವೆ. ಇದಕ್ಕಾಗಿ ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದೇವೆ ಎಂದಿದ್ದಾರೆ.