ಮಂಗಳೂರು ಕಂಬಳದಲ್ಲಿ ಹೊಸ ದಾಖಲೆ: ಶ್ರೀನಿವಾಸ್ ಗೌಡ ದಾಖಲೆ ಮುರಿದ ಸ್ವರೂಪ್
Monday, December 29, 2025
ಮಂಗಳೂರು: ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡು ಕರೆ ಮಂಗಳೂರು ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಶ್ರೀನಿವಾಸ ಗೌಡರ ದಾಖಲೆಯನ್ನು ಸ್ವರೂಪ್ ಮುರಿದರು.
ಶನಿವಾರ ಆರಂಭವಾದ ಮಂಗಳೂರು ಕಂಬಳ ಭಾನುವಾರ ಸಂಜೆ ಸಮಾರೋಪಗೊಂಡಿದ್ದು ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕಂಬಳ ಕರೆಯನ್ನು 10.87 ಸೆಕೆಂಡ್ನಲ್ಲೇ ತಲುಪಿ ನೂತನ ದಾಖಲೆ ನಿರ್ಮಿಸಿದವು.
ಈ ದಾಖಲೆಯಯನ್ನು 100 ಮೀಟರ್ಗೆ ಪರಿಗಣಿಸಿದಾಗ 8.69 ಸೆಕೆಂಡ್‌ಗಳ ದಾಖಲೆ ಆಗುತ್ತದೆ. ’ಗಾಂಧಿ ಮೈದಾನ ಸಂತು’ ಹಾಗೂ ’ಸುರತ್ಕಲ್ ಪಾಂಚ’ ಕೋಣಗಳು ದಾಖಲೆ ನಿರ್ಮಿಸಿವೆ. ಈ ಕೋಣಗಳನ್ನು ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್ ವಿಶೇಷ ಹಿರಿಮೆಗೆ ಪಾತ್ರರಾಗಿದ್ದಾರೆ.
ಕಕ್ಕೆಪದವಿನಲ್ಲಿ ವರ್ಷಗಳ ಹಿಂದೆ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.78 ಸೆಕೆಂಡ್‌ನಲ್ಲಿ 100 ಮೀ. ದೂರ ದಾಟಿ ದಾಖಲೆ ಮಾಡಿದ್ದರು. ಮಂಗಳೂರು ಕಂಬಳದ ಫೈನಲ್‌ನಲ್ಲಿ 100 ಮೀ. ದೂರವನ್ನು 8.69 ಸೆಕೆಂಡ್ನಲ್ಲಿ ದಾಟುವ ಮೂಲಕ ಈ ದಾಖಲೆಯನ್ನು ಮಾಸ್ತಿಕಟ್ಟೆ ಸ್ವರೂಪ್ ತನ್ನದಾಗಿಸಿದ್ದಾರೆ.