ಕಾಮಗಾರಿ ಪ್ರಾರಂಭ: ಎಚ್ಚರಿಕೆಯಿಂದ ಇರಲು ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ-ಗೌರಿ ಹೊಳೆಯಿಂದ ಪೈಚಾರು ಜಂಕ್ಷನ್ವರೆಗೆ ಹೊಸದಾಗಿ ರಚಿಸಿರುವ 33ಕೆವಿ ವಿದ್ಯುತ್ ಮಾರ್ಗವು ಸುಮಾರು 21 ಕಿಮೀ ಭೂಗತ ಕೇಬಲ್ ಮಾರ್ಗದ ಮುಖಾಂತರ ಹಾಲಿ ಚಾಲನೆಯಲ್ಲಿರುವ ಮಾಡಾವು-ಬೆಳ್ಳಾರೆ-ಗುತ್ತಿಗಾರು 33ಕೆವಿ ಮಾರ್ಗಕ್ಕೆ ಗೌರಿ ಎಂಬಲ್ಲಿ ಜೋಡಣೆಯಾಗಿ ಸುಳ್ಯ 33/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಪರ್ಯಾಯ 33ಕೆವಿ ವಿದ್ಯುತ್ ಮಾರ್ಗವನ್ನು ರಚಿಸಿ, ವಿದ್ಯುತ್ ಪೂರೈಕೆ ಮಾಡಲು ಉದ್ದೇಶಿಸಲಾಗಿರುತ್ತದೆ.
ಈ ವಿದ್ಯುತ್ ಮಾರ್ಗವು ಸುಳ್ಯ ತಾಲೂಕಿನ ಗೌರಿಹೊಳೆ-ಅಯ್ಯನಕಟ್ಟೆ-ಕಳಂಜ-ಶೇಣಿ-ಚೊಕ್ಕಾಡಿ-ಜೋಗಿಯಡ್ಕ-ಕಣಪ್ಪಿಲ-ಬೇಂಗಮಲೆ-ಸೋಣಂಗೇರಿ-ಪೈಚಾರು ಹತ್ತಿರ ಪ್ರದೇಶದ ಮಿತಿಯಲ್ಲಿ ಹಾದುಹೋಗಿದ್ದು, ಈ ಭೂಗತ ಕೇಬಲ್ ವಿದ್ಯುತ್ ಮಾರ್ಗವನ್ನು ಡಿ.30 ರಂದು ಅಥವಾ ಅನಂತರದ ಯಾವುದೇ ದಿನದಿಂದ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ.
ಸದರಿ ವಿದ್ಯುತ್ ಮಾರ್ಗವು ಹಾದುಹೋಗುವ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಇತರರು ಈ ವಿದ್ಯುತ್ ಮಾರ್ಗಗಳು ಹಾದುಹೋಗಿರುವಲ್ಲಿ ಮಣ್ಣಿನ ಅಗೆತ ಮಾಡುವುದನ್ನು, ಸಿವಿಲ್ ಕಾಮಗಾರಿ ನಡೆಸುವುದನ್ನು ಮತ್ತು ಇತರೇ ಕಂಬಗಳ ನೆಡುವುದನ್ನು ನಿಷೇಧಿಸಲಾಗಿರುತ್ತದೆ. ಸದ್ರಿ ಮಾರ್ಗಗಳ ಗೋಪುರಗಳನ್ನು ಹತ್ತುವುದಾಗಲೀ, ಜಾನುವಾರುಗಳನ್ನು ಗೋಪುರಕ್ಕೆ ಕಟ್ಟುವುದಾಗಲೀ ಅಥವಾ ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಮಾಡಬಾರದಾಗಿ ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸೂಚನೆಗಳನ್ನು ಉಲ್ಲಂಘಿಸಿದರೆ ಅದರಿಂದ ಉಂಟಾಗಬಹುದಾದ ಕಷ್ಟನಷ್ಟಗಳಿಗೆ ಅವರುಗಳೇ ಜವಾಬ್ದಾರರಾಗಿರುತ್ತಾರೆ ಮತ್ತು ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಜವಾಬ್ದಾರಿಯಾಗಿರುವುದಿಲ್ಲ ಸಾರ್ವಜನಿಕರು ಗಮನಿಸಿ, ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.