ಮೂಡುಬಿದಿರೆಯ ಆಳ್ವಾಸ್ ನಲ್ಲಿ ಮೊದಲ 'ಹೃದಯ ಚಿಕಿತ್ಸಾ ಕೇಂದ್ರ' ಲೋಕಾಪ೯ಣೆ

ಮೂಡುಬಿದಿರೆಯ ಆಳ್ವಾಸ್ ನಲ್ಲಿ ಮೊದಲ 'ಹೃದಯ ಚಿಕಿತ್ಸಾ ಕೇಂದ್ರ' ಲೋಕಾಪ೯ಣೆ


ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಹೃದಯ ಚಿಕಿತ್ಸಾ ಕೇಂದ್ರ (ಆಳ್ವಾಸ್ ಕಾರ್ಡಿಯಾಕ್ ಸೆಂಟರ್)ವನ್ನು  ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಬುಧವಾರ ಲೋಕಾರ್ಪಣೆಗೊಳಿಸಿದರು. 


ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು  ಸಾಮಾನ್ಯವಾಗುತ್ತಿದೆ. ಸಮಯೋಚಿತ ಚಿಕಿತ್ಸೆ ದೊರೆಯದಿದ್ದರೆ ಜೀವಕ್ಕೆ ಅಪಾಯವಾಗಬಹುದು ಈ ನಿಟ್ಟಿನಲ್ಲಿ ಆಳ್ವಾಸ್ ಆರೋಗ್ಯ ಕೇಂದ್ರವು ಜನಸಾಮಾನ್ಯರ ಆರೋಗ್ಯ ಕಾಳಜಿಯನ್ನು ಮನಗಂಡು  ಮಹತ್ವದ ಹೆಜ್ಜೆಯಾಗಿ 'ಹೃದಯ ಚಿಕಿತ್ಸಾ ಕೇಂದ್ರ'ವನ್ನು  ಆರಂಭಿಸಿರುವುದು ಅತ್ಯಂತ ಶ್ಲಾಘನೀಯ.


ಮೂಡುಬಿದಿರೆ, ಮುಲ್ಕಿ, ಕಾರ್ಕಳ ಹಾಗೂ ಬೆಳ್ತಂಗಡಿ ಪ್ರದೇಶಗಳಲ್ಲೇ ಮೊದಲ ಬಾರಿಗೆ ಸ್ಥಾಪನೆಯಾದ ಈ ಹೃದಯ ಚಿಕಿತ್ಸಾ ಕೇಂದ್ರವು ಈ ಭಾಗದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.  ಮೂಡುಬಿದಿರೆಯಲ್ಲೇ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಕೇಂದ್ರ ಸ್ಥಾಪನೆಯಾಗಿರುವುದು ಈ ಭಾಗದ ಜನರಿಗೆ ದೊರೆತ ದೊಡ್ಡ ವರದಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ಶಿಕ್ಷಣವು ವ್ಯಾಪಾರವಾಗದೆ ಮಾನವ ಸೇವೆಯ ಸಾಧನವಾಗಬೇಕು. ವಿಶೇಷವಾಗಿ ವೈದ್ಯಕೀಯ ಶಿಕ್ಷಣದಲ್ಲಿ ಲಾಭದ ದೃಷ್ಟಿಕೋನಕ್ಕಿಂತ ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಪ್ರಧಾನವಾಗಬೇಕು. ಸರ್ಕಾರಿ ಕೋಟಾದಡಿ ನೀಡುವ ಸೀಟುಗಳಿಗೆ ಶುಲ್ಕ ಕಡಿಮೆ ಇರಬಹುದು, ಆದರೆ ಕಾಲೇಜುಗಳ ನಿರ್ವಹಣೆ ಮತ್ತು ಅತ್ಯಾಧುನಿಕ ಉಪಕರಣಗಳ ವೆಚ್ಚವನ್ನು ಖಾಸಗಿ ಸಂಸ್ಥೆಗಳೇ ಭರಿಸಬೇಕಾಗುತ್ತದೆ. ಸರ್ಕಾರದ ಸೂಕ್ತ ಬೆಂಬಲವಿಲ್ಲದಿದ್ದರೆ ಇಂತಹ ಸಂಸ್ಥೆಗಳ ಕಾರ್ಯನಿರ್ವಹಣೆ ಕಷ್ಟಸಾಧ್ಯ ಎಂದು ಅವರು ತಿಳಿಸಿದರು.


ಎ.ಜೆ. ಗ್ರೂಪ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮಾತನಾಡಿ, ಸಮಯವೇ ಅತ್ಯಂತ ಮುಖ್ಯವಾಗಿರುವ ಹೃದಯ ಚಿಕಿತ್ಸೆಯು ಈಗ ಸ್ಥಳೀಯವಾಗಿ ಲಭ್ಯವಿರುವುದು ಅನೇಕ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದರು.

ಕಣಚೂರು ಗ್ರೂಪ್ ಸಂಸ್ಥಾಪಕ ಡಾ. ಹಾಜಿ ಯು.ಕೆ. ಮೋನು ಮಾತನಾಡಿ "ಮಹಾನಗರಗಳಿಗೆ ಸೀಮಿತವಾಗಿದ್ದ ಇಂತಹ ಸೌಲಭ್ಯ ಸಣ್ಣ ಪಟ್ಟಣಕ್ಕೆ ಬಂದಿರುವುದು ಶ್ಲಾಘನೀಯ" ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ನೆಲದ ಜನರಿಗಾಗಿ ಸೇವೆ ಮಾಡುವುದೇ ನನ್ನ ಗುರಿ. ಸಂಕಷ್ಟಗಳು ನನ್ನನ್ನು ಕುಗ್ಗಿಸದೆ ಮತ್ತಷ್ಟು ದೃಢವಾಗಿ ಮುನ್ನಡೆಯಲು ಸಹಾಯ ಮಾಡಿವೆ. 1980ರ ದಶಕದಲ್ಲೇ ಆರಂಭವಾದ ಈ ಆರೋಗ್ಯ ಕೇಂದ್ರದ ಮೂಲಕ ಜನರಿಗೆ ಕನಿಷ್ಠ ಶುಲ್ಕದಲ್ಲಿ ತಜ್ಞರ ಸೇವೆ ನೀಡುತ್ತಿರುವ ನೆಮ್ಮದಿ ನನಗಿದೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ, ತಜ್ಞ ವೈದ್ಯರಾದ ಡಾ. ಹರೀಶ್ ನಾಯಕ್, ಡಾ. ಹನಾ ಶೆಟ್ಟಿ ಉಪಸ್ಥಿತರಿದ್ದರು. 

ಡಾ. ವಿನಯ ಆಳ್ವ ಸ್ವಾಗತಿಸಿದರು. ಪ್ರೊ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಡಾ. ದಿತೇಶ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article