ಇರುವೈಲು ಸರಕಾರಿ ಶಾಲೆಯ ಶತಮಾನೋತ್ಸವ ಕಟ್ಟಡ ಲೋಕಾಪ೯ಣೆ

ಇರುವೈಲು ಸರಕಾರಿ ಶಾಲೆಯ ಶತಮಾನೋತ್ಸವ ಕಟ್ಟಡ ಲೋಕಾಪ೯ಣೆ

ಅಕ್ಷರದಿಂದ ಉತ್ತಮ ಭವಿಷ್ಯ: ನ್ಯಾಯವಾದಿ ತಾರನಾಥ ಪೂಜಾರಿ


ಮೂಡುಬಿದಿರೆ: ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರದೊಂದಿಗೆ 1.25 ಕೋ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇರುವೈಲಿನ ದ.ಕ ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡವನ್ನು ಹೈಕೋರ್ಟ್ ಪದಂಕಿತ ಹಿರಿಯ ನ್ಯಾಯವಾದಿ ಇರುವೈಲು ತಾರನಾಥ ಪೂಜಾರಿ ಭಾನುವಾರ ಸಂಜೆ ಲೋಕಾಪ೯ಣೆಗೊಳಿಸಿದರು. 


ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಶೈಕ್ಷಣಿಕವಾಗಿ ಸಮಾಜ ಅಭಿವೃದ್ಧಿಯಾಗದಿದ್ದಲ್ಲಿ ಯಾವುದೇ ರೀತಿಯ ಅಭಿವೃದ್ಧಿಗೂ ಅರ್ಥವಿಲ್ಲ. ಶಿಕ್ಷಣ ವ್ಯವಸ್ಥೆ ಉದ್ಯಮವಾಗಿರುವುದರಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದ್ದು ಇದಕ್ಕೆ ಕಾರಣ ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಶಿಕ್ಷಣ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರುವುದು. 


ಊರಿನವರು, ದಾನಿಗಳೂ ತಮ್ಮೂರಿನ ಶಾಲೆಯನ್ನು ಉಳಿಸಲು ಪ್ರಯತ್ನಿಸಬೇಕು. ಅಕ್ಷರದಿಂದ ಉತ್ತಮ ಭವಿಷ್ಯ ರೂಪಿಸಬಹುದೇ ಹೊರತು ಅಸ್ತ್ರದಿಂದಲ್ಲ ಎಂದು ಅವರು ಹೇಳಿದರು. 

ಶಾಸಕ ಉಮಾನಾಥ ಕೋಟ್ಯಾನ್  ಅವರು ಸುಸಜ್ಜಿತ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ ಶಾಲೆಯನ್ನು ಉಳಿಸಿ, ಅಭಿವೃದ್ಧಿಪಡಿಸುವಲ್ಲಿ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ದಾನಿಗಳ ನೆರವಿನೊಂದಿಗೆ ಪ್ರತಿಯೊಂದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುವಂತಾಗಬೇಕು. ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ಅವರನ್ನು ಮುಖ್ಯವಾಹಿನಿಗೆ ತಂದು, ಶತಮಾನೋತ್ಸವವನ್ನು ಆವರಿಸುತ್ತಿರುವ ಇರುವೈಲು ಶಾಲೆಗೆ ಸರ್ಕಾರದ ವತಿಯಿಂದ 3 ವಿವೇಕ ಕೊಠಡಿಗಳು ನೀಡಿದ್ದೇನೆ. ಶಾಲೆಗೆ ಅಭಿವೃದ್ಧಿಗೆ ಪೂರಕವಾದ ಇತರ ಕೊಡುಗೆಗಳನ್ನು ನೀಡಿರುವ ತೃಪ್ತಿ ನನ್ನಲ್ಲಿದೆ ಎಂದರು. 

ಶಾಲಾ ಹಳೆ ವಿದ್ಯಾರ್ಥಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮವಾದ ಕೆಲಸವನ್ನು ಮಾಡುವಾಗ ವಿಘ್ನಗಳು ಎದುರಾಗುವುದು ಸಹಜ. ವಿವಿಧ ರೀತಿಯ ಹೋರಾಟದ ಮೂಲಕ ಅದನ್ನು ನಿವಾರಣೆ ಮಾಡಬಹುದೆನ್ನುವುದಕ್ಕೆ ಸಾಕ್ಷಿ ಇರುವೈಲು ಶಾಲೆಯ ಅಭಿವೃದ್ಧಿ. ಗ್ರಾಮಸ್ಥರ, ದಾನಿಗಳ ವಿಶೇಷ ಪ್ರೋತ್ಸಾಹದಿಂದ ಇರುವೈಲು ಶಾಲೆ ಮಾದರಿಯಾಗಿ ಅಭಿವೃದ್ಧಿಯಾಗಿದೆ. ಇಂತಹ ಸುಸಜ್ಜಿತ ಶಾಲೆಯನ್ನು ಉಳಿಸಿ, ಬೆಳೆಸುವುದು ಎಸ್‌ಡಿಎಂಸಿ, ಶಿಕ್ಷಕರು, ಗ್ರಾಮಸ್ಥರ ಜವಾಬ್ದಾರಿ ಎಂದರು.

ಗೌರವ: ಶಾಲೆಯ ಅಭಿವೃದ್ಧಿಗೆ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ ಇರುವೈಲು ತಾರನಾಥ ಪೂಜಾರಿ, ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೖವೆಟ್ ಲಿ ಸಂಸ್ಥೆಯ ಎಕ್ಸಿಕ್ಯೂಟಿವ್ ನಿರ್ದೇಶಕ ಪ್ರಜ್ವಲ್ ಆಚಾರ್ಯ ಹಾಗೂ ದಾನಿಗಳನ್ನು ಗೌರವಿಸಲಾಯಿತು. 

ಶತಮಾನೋತ್ಸವದ ಸವಿನೆನಪಿಗಾಗಿ ತಾರನಾಥ ಪೂಜಾರಿ ಅವರು ಕೊಡಮಾಡುವ `ಶತಕ ನಿಧಿ' ಅನ್ನು ಕಂಬಳ ಕ್ಷೇತ್ರದ ಸಾಧಕ ಸತೀಶ್ಚಂದ್ರ ಪಾಣಿಲ, ಸಮಾಜಸೇವಕ ರುಕ್ಕಯ್ಯ ಪೂಜಾರಿ ಅವರು ಶತಕನಿಧಿಯ ಹಸ್ತಾಂತರ ಮಾಡಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮುಂಬೈ ಹೈಕೋರ್ಟ್ ವಕೀಲ ಐ. ಚಂದ್ರಹಾಸ ಶೆಟ್ಟಿ, ಶಿಕ್ಷಣ ಇಲಾಖೆ ನಿರ್ದೇಶಕ ಸಿಪ್ರಿಯನ್ ಮೊಂತೆರೊ, ಸಮಿತಿಯ ಗೌರವಾಧ್ಯಕ್ಷ ಎನ್. ದಿವಾಕರ ಪ್ರಭು, ಇರುವೈಲು ಗ್ರಾ.ಪಂ ಅಧ್ಯಕ್ಷೆ ಲಲಿತಾ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಧನಂಜಯ್, ಮುಖ್ಯ ಶಿಕ್ಷಕ ಅನಂತ ಭಟ್, ಸಮಿತಿಯ ಕಾರ್ಯದರ್ಶಿ ನವೀನ್ ಪೂಜಾರಿ ಉಪಸ್ಥಿತರಿದ್ದರು. 

ಸತೀಶ್ ಪೂಜಾರಿ ಸ್ವಾಗತಿಸಿದರು. ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. 

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಪ್ರಕಾಶ್ ಕೆ. ತುಮಿನಾಡು ಅಭಿನಯದ, ಜೆ. ಪಿ. ತುಮಿನಾಡು ನಿರ್ದೇಶನದ `ಕಥೆ ಎಡ್ಡೆ ಉಂಡು' ತುಳು ನಾಟಕ ಪ್ರದರ್ಶನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article