ಕುಕ್ಕೆಯಲ್ಲಿ ಡಿ.22 ರಿಂದ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ: 26ರಂದು ರಥೋತ್ಸವ
ಸುಬ್ರಹ್ಮಣ್ಯ: ದೇವಾಲಯ ನಗರಿ ಹಾಗೂ ಸಾಂಸ್ಕೃತಿಕ ನಗರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಕಿರುಷಷ್ಠಿ ಸಾಂಸ್ಕೃತಿಕ ವೈಭವವು 5 ದಿನಗಳ ಕಾಲ ಡಿ.22ರಿಂದ 26ರ ತನಕ ರಥಬೀದಿಯ ನೂತನ ಸಭಾಭವನದಲ್ಲಿ ನೆರವೇರಲಿದೆ. ಡಿ.26ರಂದು ಸಂಜೆ ಶ್ರೀ ದೇವರ ವೈಭವದ ಕಿರುಷಷ್ಠಿ ರಥೋತ್ಸವ ನೆರವೇರಲಿದೆ.
ಉದ್ಘಾಟನೆ:
ಡಿ.22 ರಂದು ಸಂಜೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಇತರ ಗಣ್ಯರು ಮುಖ್ಯ ಅತಿಥಿಗಳಾಗಿದ್ದಾರೆ. ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಗುರುಬಸವ ಮಹಾಮನೆ ಚನ್ನಯನಗಿರಿಯ ಶ್ರೀ ಬಸವಾನಂದ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಶಿವ ಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಕುಮಾರವಿಜಯ:
ಸಮಾರಂಭದ ಬಳಿಕ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮಿಕ ವಸತಿ ಶಾಲೆ ಸುಬ್ರಹ್ಮಣ್ಯ, ಬಿಳಿನೆಲೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನೆರವೇರಲಿದೆ. ನಂತರ ಶ್ರುತಿ ಸಾಗರ ಬ್ರಹ್ಮಾವರ ಇವರಿಂದ ಗಾನ ವೈಭವ ನಡೆಯಲಿದೆ.ಬಳಿಕ ಅನಂತ ಪದ್ಮನಾಭನ್ ತಿರುವನಂತಪುರ ಇವರಿಂದ ವೀಣಾ ವಾದನ ಕಛೇರಿ ನೆರವೇರಲಿದೆ. ಇವರಿಗೆ ಮೃದಂಗಂನಲ್ಲಿ ವಿದ್ವಾನ್ ಡಾ.ಕೆ.ಜಯಕೃಷ್ಣನ್, ಘಟಂನಲ್ಲಿ ವಿದ್ವಾನ್ ವೆಳ್ಳಾಟ್ಟಂಜೂರ್ ಶ್ರೀಜಿತ್ ಸಹಕರಿಸಲಿದ್ದಾರೆ. ಅಂತಿಮವಾಗಿ ಪ್ರಪ್ರಥಮ ಬಾರಿಗೆ ಕುಕ್ಕೆ ದೇವಳದ ನೌಕರ ವೃಂದದಿಂದ ಮಹೇಶ್ ಕುಮಾರ್ ಎಸ್. ಅಗ್ರಹಾರ ಸಂಯೋಜನೆಯಲ್ಲಿ ಕುಮಾರ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶಿತವಾಗಲಿದೆ.
ಎನನ್ನನೇ ಕಥೆ:
ಡಿ.23 ರಂದು ಸಂಜೆ ಪುತ್ತೂರು ಚಂದ್ರಶೇಖರ ಹೆಗ್ಗಡೆ ಬಳಗದಿಂದ ಭಕ್ತಿ ನಿನಾದ, ವಿದುಷಿ ಪ್ರಣತಿ ಚೈತನ್ಯ ಪದ್ಯಾಣ, ಬಂಟ್ವಾಳ ಇವರಿಂದ ಭರತನಾಟ್ಯ, ವಿದುಷಿ ದೀಪಿಕಾ ಶ್ರೀನಿವಾಸನ್ ಇವರಿಂದ ಲಯವಾದ್ಯ ವಾದನ ಇವರಿಗೆ ವೀಣೆಯಲ್ಲಿ ವಿದುಷಿ ಯೋಗವಂದನ, ಕೊಳಲಿನಲ್ಲಿ ವಿದುಷಿ ಸ್ಮಿತಾ ಶ್ರೀಕಿರಣ್, ಪಿಟೀಲಿನಲ್ಲಿ ವಿದುಷಿ ಪೃಥ್ವಿ ಭಾಸ್ಕರ್, ಮೃದಂಗನಲ್ಲಿ ವಿದುಷಿ ದೀಪಿಕಾ ಶ್ರೀನಿವಾಸನ್, ಖಂಜಿರಾದಲ್ಲಿ ವಿದುಷಿ ಲತಾರಾಮಾಚಾರ್, ಮೋರ್ಚಿಂಗ್‌ನಲ್ಲಿ ವಿದುಷಿ ಭಾಗ್ಯಲಕ್ಷ್ಮೀ, ಎಂ.ಕೃಷ್ಣ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ರಂಗ ಅಧ್ಯಯನ ಕೇಂದ್ರ, ಎಸ್.ಡಿ.ಎಂ. ಕಾಲೇಜು ಉಜಿರೆ ಇವರಿಂದ ಭೀಷ್ಮಾಸ್ತಮಾನ ನಾಟಕ, ಬಳಿಕ ವಿದುಷಿ ರಶ್ಮಿ ದಿಲೀಪ್ ರೈ ನಿರ್ದೇಶನದಲ್ಲಿ ಬೃಂದಾವನ ನಾಟ್ಯಾಲಯ ಪುತ್ತೂರು ಇವರಿಂದ ನಾಟ್ಯಾಯನ ಭರತನಾಟ್ಯ, ನಂತರ ಚಾಪರ್ಕ ಕಲಾವಿದರಿಂದ ಎನ್ನನೇ ಕಥೆ ತುಳು ಹಾಸ್ಯ ನಾಟಕ ಪ್ರದರ್ಶಿತವಾಗಲಿದೆ.