ಜಗತ್ತನ್ನು ಮಾನವೀಯಗೊಳಿಸುವ ಮನೋವೈಜ್ಞಾನಿಕ ಪ್ರಯೋಗಗಳು ಅಗತ್ಯ: ಡಾ.ಸತೀಶ್ಚಂದ್ರ ಎಸ್.

ಜಗತ್ತನ್ನು ಮಾನವೀಯಗೊಳಿಸುವ ಮನೋವೈಜ್ಞಾನಿಕ ಪ್ರಯೋಗಗಳು ಅಗತ್ಯ: ಡಾ.ಸತೀಶ್ಚಂದ್ರ ಎಸ್.


ಉಜಿರೆ: ಪ್ರತಿಯೊಬ್ಬರ ಹಕ್ಕುಗಳಿಗೆ ಆದ್ಯತೆ ನೀಡಿ ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರೇರಣಾದಾಯಕ ವಾತಾವರಣ ಸೃಷ್ಟಿಸುವುದನ್ನು ಕೇಂದ್ರ ಆಶಯವಾಗಿಸಿಕೊಂಡು ಜಗತ್ತನ್ನು ಮಾನವೀಯಗೊಳಿಸುವ ಪ್ರಯೋಗಗಳ ಕಡೆಗೆ ಮನೋವೈಜ್ಞಾನಿಕ ವಲಯ ಗಮನಹರಿಸಬೇಕಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ವಿಭಾಗವು ’ಪ್ರಮೋಟಿಂಗ್ ಹ್ಯೂಮನ್ ರೈಟ್ಸ್ ಇನ್ ಮೆಂಟಲ್ ಹೆಲ್ತ್ ಕೇರ್: ಅಪ್ರೋಚಸ್, ಅಪಾರ್ಚುನಿಟಿಸ್ ಆಂಡ್ ಚಾಲೆಂಜಸ್’ ಕುರಿತು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಸಂಕೀರ್ಣವಾಗುತ್ತಿದೆ. ಮನುಷ್ಯರೆಲ್ಲರನ್ನೂ ಸಮಾನವಾಗಿ ನೋಡಿ ಸಮಾಜದಲ್ಲಿ ಮಾನಸಿಕ ನೆಮ್ಮದಿ ನೆಲೆಗೊಳಿಸುವ ಪ್ರಕ್ರಿಯೆ ಸವಾಲಿನದ್ದಾಗಿ ಪರಿಣಮಿಸಿದೆ. ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಮನಸ್ಸನ್ನು ಸಂಕಟಕ್ಕೀಡುಮಾಡುವ ವರ್ತನೆಗಳೇ ಕಾರಣ. ಇಂಥ ಮಿತಿಗಳನ್ನು ಮೀರುವ ಸಾಮಾಜಿಕ ಒತ್ತಡ ಸೃಷ್ಟಿಸುವಲ್ಲಿ ಮಾನವ ಹಕ್ಕುಗಳು ಪರಿಣಾಮಕಾರಿ ಪಾತ್ರವಹಿಸುತ್ತವೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಮನಃಶಾಸ್ತ್ರಜ್ಞರು ಸಾಮಾಜಿಕ, ಸಾಮೂಹಿಕ ಬದುಕಿನ ಮಾನಸಿಕ ಸುಸ್ಥಿರತೆ ಕಾಯ್ದುಕೊಳ್ಳುವಂತಹ ಮೌಲಿಕ ಪ್ರಯೋಗಗಳ ಕೊಡುಗೆಗಳನ್ನು ನೀಡಬೇಕು. ಹಾಗಾದಾಗ ಮಾತ್ರ ದೇಶ, ಪ್ರದೇಶ ಮತ್ತು ಜಾಗತಿಕ ಮಟ್ಟದ ಸಮಖೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾರ್ಗಗಳನ್ನು ಹೊಳೆಸಿದಂತಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ  ಮನಃಶಾಸ್ತ್ರ ವಿಭಾಗದ 25 ವರ್ಷಗಳ ಕಾರ್ಯ ಚಟುವಟಿಕೆಗಳ ವಿವರಗಳನ್ನೊಳಗೊಂಡ ’ಬೆಳ್ಳಿ ಹೆಜ್ಜೆಯ ಮನೋಲಹರಿ’ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ಮಾತನಾಡಿದರು. ಸಮಾಜದ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಮನಃಶಾಸ್ತ್ರ ಪೂರಕವಾದ ಚಿಂತನೆಯನ್ನು ಒದಗಿಸಿಕೊಡುತ್ತದೆ. ಮಾನವ ಹಕ್ಕುಗಳನ್ನು ಕೇಂದ್ರೀಕರಿಸಿಕೊಂಡು ಮಾನಸಿಕ ಸ್ವಾಸ್ಥ್ಯದ ಸಬಲೀಕರಣದ ಮೌಲಿಕ ಚರ್ಚೆಗಳು ವಿಸ್ತೃತವಾಗಿ ನಡೆಯಬೇಕು ಎಂದು ಶುಭ ಹಾರೈಸಿದರು.

ವಿಚಾರ ಸಂಕೀರ್ಣದ ಪ್ರಧಾನ ಆಶಯ ಪ್ರಸ್ತುತಪಡಿಸಿದ ಮಂಗಳೂರಿನ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಾರಾನಾಥ ಶೆಟ್ಟಿ ಮಾತನಾಡಿದರು. 

ಭಾರತದ ಸಂವಿಧಾನದ ಉದ್ದೇಶವು ಮಾನವ ಹಕ್ಕುಗಳನ್ನು ಉತ್ತೇಜಿಸಿ ಸಮಾನತೆಯನ್ನು ಸಾರುವುದೇ ಆಗಿದೆ. ಎಲ್ಲರನ್ನು ಸಮಾನವಾಗಿ ಕಂಡಾಗ ಭಾರತದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಆಗಲು ಸಾಧ್ಯ. 2017 ರಲ್ಲಿ  ಮೆಂಟಲ್ ಹೆಲ್ತ್ ಕೇರ್ ಸಂಬಂಧಿತ ಕಾಯ್ದೆಯನ್ನು ಪುನರ್ ವ್ಯಾಖ್ಯಾನಗೊಳಿಸಿ ಪಾಸಿಟಿವ್ ಮೆಂಟಲ್ ಹೆಲ್ತ್ ಕೇರ್ ಆಕ್ಟ್ ಎಂದು ಮರುನಾಮಕರಣ ಮಾಡಿದಾಗ ಮಾನಸಿಕ ಅಸ್ವಸ್ಥರನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಸಾಧ್ಯವಾಗಲಾರಂಭಿಸಿತು ಎಂದರು.

ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲಿ  ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಬಾಬು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಹೆಚ್ ವಂದಿಸಿದರು. ದ್ವಿತೀಯ ಎಂ.ಎಸ್.ಸಿ ಮನಶಾಸ್ತ್ರ ವಿಭಾಗದ ಸ್ಮಿತಾ ಮತ್ತು ಪ್ರಥಮ ಎಂ ಎಸ್ ಸಿ ಮನಶಾಸ್ತ್ರ ವಿಭಾಗದ ಜೆಸ್ಲಿನ್ ಜೈಮೊನ್ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article