‘ಲೈಂಗಿಕ ಕಿರುಕುಳ ತಡೆಗಟ್ಟುವಿಕೆ’ ಕಾರ್ಯಗಾರ
Saturday, December 20, 2025
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ, ಉಜಿರೆ ಇದರ ಮಾತೃ ಶ್ರೀ ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಡಿಸೆಂಬರ್ ೧೯ರಂದು ‘ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ’ ನಡೆಯಿತು.
ಕಾರ್ಯಕ್ರಮವು ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗುವುದರೊಂದಿಗೆ ಶುಭಾರಂಭಗೊಂಡಿತು. ಶಾಂತಿವನ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಬಿಂದು ಅವರು ಸ್ವಾಗತ ಭಾಷಣ ಮಾಡಿ ಅತಿಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮನೋರಮಾ ಭಟ್ ಅವರು, ಲೈಂಗಿಕ ಕಿರುಕುಳ ತಡೆಗಟ್ಟುವಲ್ಲಿ ಮಾನವ ಹಕ್ಕುಗಳ ಪಾತ್ರ, ಆಂತರಿಕ ದೂರು ಸಮಿತಿಯ ಮಹತ್ವ ಹಾಗೂ ಅದರ ಕಾರ್ಯನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಧೈರ್ಯದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಸುಜಾತಾ ಕೆ.ಜೆ. ಅವರು ವಹಿಸಿದ್ದರು. ಅವರು ವಿಷಯದ ಕುರಿತು ಜಾಗೃತಿ ಮೂಡಿಸಿ, ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಸಮಾಜವನ್ನು ಎದುರಿಸುವಲ್ಲಿ ಪ್ರಬಲರಾಗಬೇಕೆಂದು ಪ್ರೋತ್ಸಾಹಿಸಿದರು.
ಡಾ. ಮೇಘನಾ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.