ನರೇಗಾ ಸ್ವರೂಪವೇ ಬದಲಾವಣೆ ವಿರೋಧಿಸಿ ಜ.27 ರಂದು ಬಂಟ್ವಾಳದಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ: ರೈ
ಸೋಮವಾರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜ.27 ರಂದು ಬೆಳಗ್ಗೆ 9.30ಕ್ಕೆ ಬಂಟ್ವಾಳಕ್ಕೆ ಸಮೀಪದ ಮಣಿಹಳ್ಳ ಜಂಕ್ಷನ್‌ನಿಂದ ಬಿ.ಸಿ.ರೋಡ್ ಕೈಕಂಬವರೆಗೆ ಪಾದಯಾತ್ರೆ ನಡೆಸಿ ವಾಪಾಸ್ ಅಲ್ಲಿಂದ ಅಗಮಿಸಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದರು.
ಇದಕ್ಕೂ ಮೊದಲು ಬಂಟ್ವಾಳ ಕ್ಷೇತ್ರದಲ್ಲಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕಿ.ಮೀ.ಗಳಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಬೆಂಬಲಿತ ಆಡಳಿತವಿರುವ ಗ್ರಾ.ಪಂ.ಗಳಲ್ಲಿಈ ಕುರಿತು ವಿರೋಧಿ ನಿರ್ಣಯ ಹಾಗೂ ಅಧಿಕಾರದಲ್ಲಿಲ್ಲದ ಗ್ರಾ.ಪಂಗಳಲ್ಲಿ ಮನವಿ ಸಲ್ಲಿಕೆ ಮಾಡಲಾಗುವುದು ಎಂದು ವಿವರಿಸಿದರು.
ಯುಪಿಎಯ ಜಾರಿಗೆ ತಂದಿರುವ ಹಲವು ಮಹತ್ವಾಕಾಂಕ್ಷಿ ಹಾಗೂ ಜನಸಾಮಾನ್ಯರ ಪರವಾದ ಯೋಜನೆಗಳ ಹೆಸರು ಬದಲಾವಣೆ ಹಾಗೂ ಸ್ವರೂಪವನ್ನೇ ಬದಲಾಯಿಸುವ ಕೆಲಸವನ್ನು ಈಗಿನ ಕೇಂದ್ರ ಸರಕಾರ ಮಾಡುತ್ತಿದೆ. ನರೇಗಾದ ಸ್ವರೂಪ ಬದಲಾಯಿಸಿ ಶೇ.೬೦ ಮತ್ತು ೪೦ ಅನುಪಾತವನ್ನು ಮಾಡಿರುವುದು ಸ್ಥಳೀಯಾಡಳಿತಕ್ಕೆ ಹೊರೆಯಾಗಲಿದೆ ಎಂದು ವಿಶ್ಲೇಷಿಸಿದ ರಮಾನಾಥ ರೈ ಅವರು ಈ ಯೋಜನೆ ಜಾಗತಿಕ ಮಟ್ಟದಲ್ಲಿಯು ಹೆಗ್ಗಳಿಕೆಯನ್ನು ಪಡೆದಿದ್ದು, ಕಾರ್ಮಿಕರು ಸಹಿತ ಅನೇಕ ಜನರ ಭವಿಷ್ಯವನ್ನು ಉತ್ತಮವಾಗಿತ್ತಲ್ಲದೆ ಗ್ರಾಮೀಣ ಭಾಗದಲ್ಲಿಯು ಗ್ರಾ.ಪಂ. ವ್ಯಾಪ್ತಿಯಲ್ಲು ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಈ ಮೂಲಕ ಅನೇಕರಿಗೆ ಉದ್ಯೋಗ ಕೂಡ ಸಿಕ್ಕಿತ್ತು ಎಂದರು.
ಯುಪಿಎ ಸರಕಾರದ ಅಡಳಿತದ ಅವಧಿಯಲ್ಲಿ ಜಾರಿಯಾದ ‘ನಿರ್ಮಲ ಗ್ರಾಮ’ ಕಾರ್ಯಕ್ರಮವೇ ಪ್ರಸ್ತುತ ಸ್ಚಚ್ಚ ಗ್ರಾಮ ಕಾರ್ಯಕ್ರಮವಾಗಿದೆ. ಈ ರೀತಿಯ ಹತ್ತು ಹಲವು ಯೋಜನೆಗಳ ಮೂಲ ಸ್ವರೂಪವನ್ನು ಬದಲಾಯಿಸುವ ಕಾರ್ಯಗಳು ಈಗಿನ ಬಿಜೆಪಿ ಸರಕಾರ ಮಾಡುತ್ತಿದೆಯಲ್ಲದೆ ಜಿ.ಎಸ್.ಟಿ. ಬಂದ ಬಳಿಕ ತೆರಿಗೆಯ ಹೊರೆ ರಾಜ್ಯ ಸರಕಾರದ ಮೇಲೆ ಬೀಳುತ್ತಿದ್ದು, ಕೆಲವು ರಾಜ್ಯಗಳು ಅನುದಾನ ಸಿಗದೆ ಅಭಿವೃದ್ಧಿ ಕಾಣದೆ ಸೊರಗಿವೆ ಎಂದು ಹೇಳಿದರು.
ದ.ಕ. ಜಿಲ್ಲಾ ಮಟ್ಟದಲ್ಲಿಯು ಅಭಿಯಾನ ನಡೆಸಲು ನಿರ್ಧರಿಸಲಾಗಿದ್ದು, ಸಂಪಾಜೆಯಿಂದ ಮುಲ್ಕಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕುರಿತು ಪಕ್ಷದ ಜಿಲ್ಲಾ ನಾಯಕರುಗಳು ಚರ್ಚಿಸಿ ಅತೀ ಶೀಘ್ರದಲ್ಲಿ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ಹೊಂದಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ, ಜನಪರವಾದ ಆಡಳಿತ ನೀಡುತ್ತಿದ್ದಾರೆ ಎಂದ ಅವರು ಮುಖ್ಯಮಂತ್ರಿ ಬದಲಾವಣೆಯ ಕುರಿತ ಸುದ್ದಿಗಾರರ ಪ್ರಶ್ನೆಗೆ ‘ನೋಕಮೆಂಟ್ಸ್’ ಎಂದು ಉತ್ತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಲ್ಲಿಕಾ ಶೆಟ್ಟಿ, ಲವೀನಾ ವಿಲ್ಮಾ ಮೊರಾಸ್, ಸುದರ್ಶನ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಲುಕ್ಮಾನ್ ಉಪಸ್ಥಿತರಿದ್ದರು.