ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಕುಟುಂಬದ ಧರಣಿ
ಪುಣಚ ಗ್ರಾಮದ ಸುಣ್ಣಂಗಳ ರಾಮಣ್ಣ ನಾಯ್ಕ ಅವರ ಪತ್ನಿ ಸುನಂದಾ ಮತ್ತು ಮಕ್ಕಳು ತಮ್ಮ ಮನೆಗೆ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ಆಡಳಿತ ಸೌಧದ ಮೆಟ್ಟಿಲಲ್ಲಿ ಧರಣಿ ಕುಳಿತರು.
ಇವರ ಹೋರಾಟಕ್ಕೆ ಅಂಬೇಡ್ಕರ್ ತತ್ವ ಹಿತರಕ್ಷಣಾ ವೇದಿಕೆರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ನೇತೃತ್ವ ವಹಿಸಿದ್ದರು.
ಕಳೆದ 75 ವರ್ಷಗಳಿಂದ ಇಲ್ಲಿ ಕಾಲುದಾರಿ ಇದ್ದು ರಸ್ತೆ ನಿರ್ಮಿಸಿ ಕೊಡುವಂತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಯಾವುದೇ ಸ್ಪಂದನ ನೀಡಲಿಲ್ಲ ಎಂದು ಪ್ರತಿಭಟನೆ ನಿರತ ಕುಟುಂಬ ಹೇಳಿದ್ದಾರೆ.
ತಿಂಗಳ ಹಿಂದೆ ರಾಮಣ್ಣ ಅವರ ಪತ್ನಿ ಸುನಂದಾ ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಹೊತ್ತುಕೊಂಡು ಆಸ್ಪತ್ರೆಗೆ ಹೋಗಬೇಕಾಗಿದೆ. ಈ ಬಗ್ಗೆ ಎರಡು ದಿನದ ಹಿಂದೆ ನಡೆದ ಎಸ್.ಸಿ.ಎಸ್.ಟಿ. ಸಭೆಯಲ್ಲಿ ಕೂಡ ಅಧಿಕಾರಿಗಳ ಗಮನಕೆ ತರಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕಂದಾಯ ಅಧಿಕಾರಿ ಸ್ಪಷ್ಟನೆ:
ರಾಮಣ್ಣ ಕುಟುಂಬಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಕಂದಾಯ ಇಲಾಖೆಗೆ ಲಿಖಿತವಾದ ಅರ್ಜಿ ಸಲ್ಲಿಕೆಯಾಗಿದೆ. ತಹಶಿಲ್ದಾರ್ ಅವರ ನೇತೃತ್ವದಲ್ಲಿ ಜಾಗದ ಸರ್ವೇ ಕಾರ್ಯ ಮಾಡಲಾಗಿದೆ. ಸ್ವಂತ, ಖಾಸಗಿ ಜಾಗದಲ್ಲಿ ಸಮಸ್ಯೆಗಳಿದ್ದು, ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಕುಟುಂಬಕ್ಕೆ ಭರವಸೆ ನೀಡಲಾಗಿದೆ. ತಹಶೀಲ್ದಾರ್ ಮಂಜುನಾಥ್ ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯಾಧಿಕಾರಿ ತಿಳಿಸಿದ್ದಾರೆ.