ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕತ್ತಿನಿಂದ ತಾಳಿ, ಸರ ಕಸಿದು ಪರಾರಿ: ದೂರು ದಾಖಲು
ಬಂಟ್ವಾಳ: ಮಹಿಳೆಯೊಬ್ಬರ ಬಳಿ ದಾರಿ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಮಹಿಳೆಯ ಕತ್ತಿನಲ್ಲಿ ಇದ್ದ ತಾಳಿ ಹಾಗೂ ಸರವನ್ನು ಕಸಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಘಟನೆಯ ವಿವರ:
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ನಿವಾಸಿ ದೂರುದಾರರಾದ ಪದ್ಮಾವತಿ (55) ಎಂಬವರ ದೂರಿನಂತೆ ಜ.8 ರಂದು ದೂರುದಾರರು ಮಂಗಳೂರಿಗೆ ಹೋಗಿ ವಾಪಾಸು ಬರುವಾಗ ವಗ್ಗ ಜಂಕ್ಷನ್ನಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯಾದ ಕಂಗಿತ್ತಿಲಿನ ವಗ್ಗ-ಕಾರೀಂಜ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ ಸುಮಾರು 4.10 ರ ಅಂದಾಜಿಗೆ ಅದೇ ರಸ್ತೆಯ ವಗ್ಗ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಒಬ್ಬ ಅಪರಿಚಿತ ಹೆಲ್ಮೆಟ್ ಹಾಕಿಕೊಂಡು ಬಂದು ದೂರುದಾರರಲ್ಲಿ ನಡೆದುಕೊಂಡು ಹೋಗುತ್ತಿದ್ದ ರಸ್ತೆಯ ಬದಿಗೆ ಆತನ ವಾಹನವನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದು ದೂರುದಾರರ ಬಳಿ ತುಳು ಭಾಷೆಯಲ್ಲಿ ಕಕ್ಕೆಪದವುವಿಗೆ ಹೋಗುವ ರಸ್ತೆ ಯಾವುದು ಎಂಬುದಾಗಿ ಕೇಳಿದ್ದಾನೆ.
ಪದ್ಮಾವತಿ ಕೈಸನ್ನೆ ಮಾಡಿ ದಾರಿ ತೋರಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿ ಅವರ ಕತ್ತಿಗೆ ಕೈಹಾಕಿ ಚಿನ್ನದ ಕರಿಮಣಿ ಸರವನ್ನು ಕಸಿಯಲು ಪ್ರಯತ್ನಿಸಿದಾಗ ಕರಿಮಣಿ ಸರವನ್ನು ಅವರು ಕೈಯಲ್ಲಿ ಹಿಡಿದುಕೊಂಡು ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಸರವನ್ನು ಎಳೆಯುವ ರಭಸಕ್ಕೆ ತಾಳಿ ಮತ್ತು ಸ್ವಲ್ಪ ಭಾಗ ಕರಿಮಣಿ ಸರದೊಂದಿಗೆ ಕಾರಿಂಜ ರಸ್ತೆಯಲ್ಲಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 5 ಗ್ರಾಂ ಚಿನ್ನವನ್ನು ಕಸಿಯಲಾಗಿದ್ದು, ಇದರ ಅಂದಾಜು ಮೌಲ್ಯ 40 ಸಾ.ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.