ಅಯ್ಯಪ್ಪ ಮಾಲಾಧಾರಿ ಬಾಲಕ ರಸ್ತೆ ಅಪಘಾತದಿಂದ ಮೃತ್ಯು: ಇನ್ನೋರ್ವ ಗಂಭೀರ
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಷ್ಮೀಶ್ ಪೂಜಾರಿ(15) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಈತ ಸಿದ್ದಕಟ್ಟೆ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿಗಳಾದ ಅಶೋಕ್ ಪೂಜಾರಿ, ಸಂತೋಷ್ ಪೂಜಾರಿ, ಸಚಿನ್, ಗೋಪಾಲಪೂಜಾರಿ, ಲಕ್ಮೀಶ ಪೂಜಾರಿ, ಕಿರಣ್, ವರದ್ ರಾಜ್ ಅವರು ಸೇರಿ 7 ಮಂದಿ ಮಾಲಾಧಾರಿಗಳು ಇನ್ನೋವಾ ಕಾರಿನಲ್ಲಿ ಕುರಿಯಾಳದಿಂದ ಶಬರಿಮಲೆಗೆ ತೆರಳಿದ್ದರು.
ಬಾಲಕ ಲಕ್ಷ್ಮೀಶ್ ತನ್ನ ತಂದೆ ಅಶೋಕ್ ಪೂಜಾರಿ ಜೊತೆ ಶಬರಿಮಲೆಗೆ ಜ.7 ರಂದು ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸು ಜ.9 ರಂದು ಊರಿಗೆ ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಇವರ ಕಾರು ಕೆಟ್ಟುಹೋದುದರಿಂದ ಅಶೋಕ್ ಪೂಜಾರಿ ಒಬ್ಬರು ಕಾರಿನೊಳಗೆ ಕುಳಿತಿದ್ದರೆ ಉಳಿದಂತೆ ಚಾಲಕ ಸೇರಿ ಇತರರು ಕಾರಿನ ಮುಂಭಾಗ ಬೊನೆಟ್ ತೆರೆದು ಕಾರಿನ ರಿಪೇರಿಯಲ್ಲಿ ನಿರತರಾಗಿದ್ದರೆನ್ನಲಾಗಿದೆ. ನುಸುಕಿನ ಜಾವ ಸುಮಾರು 2 ಗಂಟೆಯ ವೇಳೆಗೆ ಯಮಸ್ವರೂಪಿ ಲಾರಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ನಿರತರಾಗಿದ್ದವರಿಗೆ ನೇರವಾಗಿ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ.
ಢಿಕ್ಕಿಯ ತೀವ್ರತೆಗೆ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ಸಂದರ್ಭ ಬಾಲಕ ಲಕ್ಷೀಶ್ ಅದೇ ಲಾರಿಯಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಉಳಿದಂತೆ ಮಾಲಾಧಾರಿ ವರದರಾಜ್ ಎಂಬವರು ಗಂಭೀರ ಸ್ವರೂಪದ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮುಂಭಾಗದಲ್ಲಿದ್ದ ಮತ್ತುಳಿದವರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.