ಸಿಗದ ವೇತನ ಪುರಸಭೆಯ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ
ಈ ಸಂದರ್ಭ ಆಡಿಟ್ ವರದಿಗಳನ್ನು ಪರಿಶೀಲಿಸಿದ ಸಂದರ್ಭ ಹೊರಗುತ್ತಿಗೆ ಸಿಬ್ಬಂದಿಯ ನೇಮಕ, ವೇತನ ಪಾವತಿಯಲ್ಲಿ ಟೆಂಡರ್ ಕರೆಯದೆ ಆಗಿರುವ ಲೋಪಗಳು ಕಂಡುಬಂದಿದ್ದು, ಹೀಗಾಗಿ ವೇತನ ನೀಡಿಲ್ಲ ಅದಕ್ಕೆ ಸಂಬಂಧಿಸಿ ಮೇಲಾಧಿಕಾರಿಗಳ ಗಮನಕ್ಕು ತರಲಾಗಿದೆ ಎಂದು ಮುಖ್ಯಾಧಿಕಾರಿಯವರು ಸದಸ್ಯರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರಾದ ಗೋವಿಂದಪ್ರಭು, ಶರೀಫ್, ರಾಮಲ್‌ಕೃಷ್ಣ ಆಳ್ವ, ಹರಿಪ್ರಸಾದ್ ಅವರು ಮಂಗಳವಾರ ಶಾಸಕರು, ಸಂಸದರು ತಮ್ಮ ಸಮಕ್ಷಮದಲ್ಲಿ ನಡೆದ ಚರ್ಚೆಯಂತೆ ನೌಕರರಿಗೆ ವೇತನ ಪಾವತಿಸುವ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದರಲ್ಲದೆ ಲೋಪಗಳಿದ್ದರೆ ಅದನ್ನು ತನಿಖೆಗೊಪ್ಪಿಸಿ ಎಂದರು. ಈ ಬಗ್ಗೆ ಕೌನ್ಸಿಲ್‌ಗೂ ಪ್ರಶ್ನಿಸಬಹುದಾದ ಜವಾಬ್ದಾರಿ ಇತ್ತು. ಅದೇ ರೀತಿ ಈ ಹಿಂದಿನ ಅಧಿಕಾರಿಗಳಿಂದಲು ಲೋಪವಾಗಿದೆ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಒಪ್ಪಿಕೊಂಡರು.
ಜಿಲ್ಲಾಧಿಕಾರಿವರು ನಿರ್ದೇಶಿಸಿರುವಂತೆ ನೌಕರರ ಪ್ರಸ್ತಾವನೆಯನ್ನು ಇಂದೇ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತನೆ ಮಂಜೂರಾತಿ ದೊರಕಿದ ಅರ್ಧತಾಸಿನಲ್ಲಿ ವೇತನ ಪಾವತಿಸುವುದಾಗಿ ಭರವಸೆ ನೀಡಿದರು.
ಈ ವಿಚಾರವನ್ನು ಪ್ರತಿಭಟನಾ ನಿರತ ನೌಕರರಿಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಮುಖ್ಯಾಧಿಕಾರಿಯವರು ಪ್ರತಿಭಟನಾ ನಿರತ ನೌಕರರ ಬಳಿಗಾಗಮಿಸಿ ಯಾರನ್ನು ನೌಕರಿಯಿಂದ ತೆಗೆಯುತ್ತಿಲ್ಲ, ಪುರಸಭೆಯಿಂದಾದ ನೇರ ನೇಮಕಾತಿ ಮತ್ತು ಹೊರಗುತ್ತಿಗೆ ನೌಕರರ ಪ್ರಸ್ತಾವನೆ ಈ ದಿನವೇ ಜಿಲ್ಲಾಧಿಕಾರಿಗೆ ಸಲ್ಲಿಸುತ್ತೆನೆ. ಮಂಜೂರಾತಿ ದೊರೆತಾಕ್ಷಣ ವೇತನ ಪಾವತಿಸುವುದಾಗಿ ಭರವಸೆಯಿತ್ತರು. ಈ ಪ್ರಕ್ರಿಯೆಗೆ ಕನಿಷ್ಠ ವಾರದ ಅವಕಾಶ ಬೇಕಾದೀತು. ಈ ಬಗ್ಗೆ ತಾನೇ ಮುತುವರ್ಜಿ ವಹಿಸುವುದಾಗಿಯು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಭರವಸೆಯಿತ್ತರಲ್ಲದೆ ಪ್ರತಿಭಟನೆ ಹಿಂತೆಗೆದು ಕೆಲಸಕ್ಕೆ ಹಾಜರಾಗುವಂತೆ ಕೋರಿದರು.
ಅದೇ ರೀತಿ ನೀರಿನ ಬಿಲ್ಲು ಮನೆ, ಮನೆಗೆ ವಿತರಿಸಿ, ಹಣ ಸಂಗ್ರಹಿಸುವ ಆರು ಮಂದಿಗೂ ಸ್ವಸಹಾಯ ಸಂಘದಡಿಗೆ ತಂದು ಬಿಲ್ಲು ವಿತರಿಸುವ ಕುರಿತು ಪರಿಶೀಲಿಸುವುದಾಗಿಯು ಮುಖ್ಯಾಧಿಕಾರಿಯವರು ಭರವಸೆಯಿತ್ತರು.
ಇತ್ತ ಪ್ರತಿಭಟನಾಕಾರರು ಸ್ಪಷ್ಟ ಭರವಸೆ ನೀಡದೆ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು, ಬಳಿಕ ಮತ್ತೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ನಡುವೆ ಮಾತುಕತೆ ನಡೆದು ಮಧ್ಯಾಹ್ನದ ಬಳಿಕ ಮುಖ್ಯಾಧಿಕಾರಿಯವರು ಸ್ಪಷ್ಟವಾದ ಭರವಸೆಯಿತ್ತ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ಬಂಟ್ವಾಳ ಪುರಸಭಾ ಕಚೇರಿ ಹಾಗೂ ಕುಡಿಯುವ ನೀರಿನ ಪೂರೈಕೆಯ ಘಟಕ ಸೇರಿದಂತೆ ಪುರಸಭೆಯಿಂದ ನೇರ ನೇಮಕಾತಿ ಮತ್ತು ಹೊರಗುತ್ತಿಗೆಯಾಧಾರದಲ್ಲಿ ಸುಮಾರು 58 ಮಂದಿ ಕೆಲಸ ಮಾಡುತ್ತಿದ್ದು, ಇವರಿಗೆ ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ವೇತನ ಪಾವತಿಯಾಗದೆ ಕಂಗಾಲಾಗಿದ್ದಾರೆ. ನೌಕರರು ಕರ್ತವ್ಯ ಹಾಜರಾಗದೆ ಪ್ರತಿಭಟನೆಗಿಳಿದರಿಂದ ಮಧ್ಯಾಹ್ನದ ವರೆಗೆ ಜನರು ಕೆಲಸ, ಕಾರ್ಯಗಳಾಗದೆ ಬರಿಗೈಯಲ್ಲಿ ವಾಪಾಸಾಗಬೇಕಾಯಿತು.

