ಕಿಟಕಿಯಲ್ಲಿ ಇಣುಕುವ ವಿಕೃತ ಹವ್ಯಾಸಿಯ ಪತ್ತೆಗಿಳಿದ ಕೋಟ ಪೊಲೀಸರು
ಕುಂದಾಪುರ: ಬ್ರಹ್ಮಾವರ ತಾಲೂಕು ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೇಡಿಯೊರ್ವ ಸ್ನಾನಗೃಹಗಳ ಕಿಟಕಿಯಲ್ಲಿ ಇಣುಕಿ ಪರಾರಿಯಾಗುತ್ತಿರುವ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ.
ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದಲ್ಲಿನ ಒಂದು ಮನೆಯಲ್ಲಿ ಸೋಮವಾರ ಸಂಜೆ ಹೊತ್ತಿನಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಸ್ನಾನಗೃಹದ ಹೆಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಮಹಿಳೆ ಜೋರಾಗಿ ಬೊಬ್ಬೆ ಹಾಕಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಮಧ್ಯೆ ಮಂಗಳವಾರ ಪಾಂಡೇಶ್ವರ ಮುಖ್ಯ ರಸ್ತೆ ಸಮೀಪವಿರುವ ಮನೆಯೊಂದರಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ಕಿಟಕಿಯಲ್ಲಿ ಇಣುಕಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಕೋಟ ಪೋಲಿಸರು, ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ.
ವಿಚಿತ್ರ ಹವ್ಯಾಸದ ಈ ದುಷ್ಕೃತ್ಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವಂತೆ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೋಟ ಠಾಣಾ ಪೊಲೀಸರು ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ.