ಟಿಪ್ಪರ್ ಸ್ಕೂಟರ್‌ಗೆ ಢಿಕ್ಕಿ: ಸ್ಕೂಟರ್ ಸವಾರ ಸಾವು

ಟಿಪ್ಪರ್ ಸ್ಕೂಟರ್‌ಗೆ ಢಿಕ್ಕಿ: ಸ್ಕೂಟರ್ ಸವಾರ ಸಾವು


ಕುಂದಾಪುರ: ಮರಳು ತುಂಬಿದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜ.7 ರಂದು ಹಂಗಳೂರು ಯೂನಿಟಿ ಹಾಲ್ ಬಳಿ ಸಂಭವಿಸಿದೆ.

ಮೃತರನ್ನು ಬೀಜಾಡಿ ಕೃಷ್ಣಮೂರ್ತಿ ಅಡಿಗ(55) ಎಂದು ಗುರುತಿಸಲಾಗಿದೆ.

ಕುಂದಾಪುರದಿಂದ ಕೋಟೇಶ್ವರದ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಬಂದ ಮರಳು ತುಂಬಿದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ. 

ಕುಂದಾಪುರ ಹೊರವಲಯದ ಶಟ್ರಕಟ್ಟೆ ಎಂಬಲ್ಲಿ ಸೋಮವಾರವಷ್ಟೇ ಸರ್ಕಾರಿ ಬಸ್ಸಿಗೆ ಟಿಪ್ಪರ್ ಢಿಕ್ಕಿಯಾಗಿ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದರು. ಇನ್ನೂ ಮೂವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದೀಗ ಮತ್ತೆ ಟಿಪ್ಪರ್ ಓರ್ವನನ್ನು ಬಲಿ ಪಡೆದಿದ್ದು, ಟಿಪ್ಪರ್‌ಗಳ ಆಟಾಟೋಪಕ್ಕೆ ಪೊಲೀಸರು ಕಡಿವಾಣ ಹಾಕಲೇಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಕಂಡ್ಲೂರು ಪಿಎಸ್‌ಐವರ್ಗ:

ಶೆಟ್ರಕಟ್ಟೆ ತಿರುವಿನಲ್ಲಿ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಬಸ್ ನಡುವೆ ಢಿಕ್ಕಿ ಸಂಭವಿಸಿ 18ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ನಿರ್ಣಾಯಕ ಕ್ರಮ ಕೈಗೊಂಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಸೀರ್ ಹುಸೇನ್ ಅವರನ್ನು ಅಜೆಕಾರು ಪೊಲೀಸ್ ಠಾಣೆಗೆ ಅನ್ಯ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಬೀಟ್ ಪೊಲೀಸ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ. ಗ್ರಾಮಾಂತರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಕಾಯ್ಕಿಣಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ಎಸ್‌ಪಿ ಹರಿರಾಮ್ ಶಂಕರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರ ಸಂಜೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಕೇರಳ ನೋಂದಣಿಯ ಟಿಪ್ಪರ್ ಲಾರಿ (ಕೆಎಲ್-27 ಎ 7100) ಕುಂದಾಪುರದಿಂದ ಅಜ್ರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಲಾರಿ ಚಾಲಕನ ನಿರ್ಲಕ್ಷ್ಯ, ಅಕ್ರಮ ಮಣ್ಣು ಸಾಗಣೆ ಮತ್ತು ಟಿಪ್ಪರ್ ಲಾರಿಯ ದಾಖಲೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಯಲು ಟಿಪ್ಪರ್ ಟ್ರಕ್‌ಗಳಲ್ಲಿ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಆಗ್ರಹಗಳು ಕೇಳಿ ಬಂದಿದ್ದವು. ದುರಂತ ನಡೆದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಗಂಭೀರ ಸ್ಥಿತಿಯನ್ನು ನೋಡಿಕೊಂಡು ಬಂದಿದ್ದ ಎಸ್ಪಿ ಹರಿರಾಮ್ ಶಂಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಬೈಂದೂರು, ಕುಂದಾಪುರ, ಕೊಲ್ಲೂರು, ಶಂಕರನಾರಾಯಣ ಮುಂತಾದ ಕಡೆಗಳಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಾಸಿರ್ ಹುಸೇನ್ ಇತ್ತೀಚೆಗಷ್ಟೇ ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಕಾರ್ಯ ಶೈಲಿಯ ಬಗ್ಗೆ ಸಾರ್ವಜನಿಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ ಅವರ ಹಠಾತ್ ವರ್ಗಾವಣೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article