ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ವರ್ಷದ ಸಂಭ್ರಮ
ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ವಿಶೇಷತೆಗಳು:
ಕಳೆದ 1 ವರ್ಷದಲ್ಲಿ ಲಕ್ಷಾಂತರ ಭಕ್ತರು ಈ ಕ್ಯೂಕಾಂಪ್ಲೆಕ್ಸ್ ಮೂಲಕ ಸಾಗಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಧರ್ಮಸ್ಥಳದ ಶ್ರೀ ಸಾನಿಧ್ಯ ಕಾಂಪ್ಲೆಂಕ್ಸ್ ಪ್ರವೇಶಿಸುತ್ತಿದ್ದಂತೆ ಭಕ್ತರಿಗೆ ಅದ್ಭುತ ಅನುಭವ ಸಿಗುತ್ತಿದ್ದು, ಕ್ಯೂ ಕಾಂಪ್ಲೆಕ್ಸ್ 2,75,177 ಚದರ ಅಡಿಯ ಬೃಹತ್ ಕಟ್ಟಡವಾಗಿದ್ದು, ಮೂರು ಮಹಡಿಗಳನ್ನ ಹೊಂದಿದೆ. ಇಲ್ಲಿ 16 ಹಾಲ್ ವ್ಯವಸ್ಥೆ ಇದ್ದು, ಒಟ್ಟು ಸಂಕೀರ್ಣದಲ್ಲಿ 10 ರಿಂದ 12 ಸಾವಿರ ಭಕ್ತಾದಿಗಳನ್ನ ಏಕಕಾಲದಲ್ಲಿ ನಿರ್ವಹಿಸಬಹುದಾಗಿದೆ.
ಶ್ರೀ ಸಾನಿಧ್ಯದ ಒಳಗಡೆ ಉಷ್ಣಾಂಶ ನಿಯಂತ್ರಿಸಲು ಫ್ರೆಶ್ ಏರ್ ತಂತ್ರಜ್ಞಾನದ ಜೊತೆಗೆ ಬೃಹತ್ ಹವಾನಿಯಂತ್ರಕ ಫ್ಯಾನ್ ವ್ಯವಸ್ಥೆ ಇಲ್ಲಿದೆ. ಸುಸಜ್ಜಿತ ಶೌಚಾಲಯ, ಮಗು ಆರೈಕೆ ಕೊಠಡಿ, ಕುಡಿಯುವ ನೀರು, ಕೆಫೆಟೇರಿಯಾ, ಡಿಜಿಟಲ್ ಟಿ.ವಿ. ಹಾಗೂ ಆಡಿಯೋ ವ್ಯವಸ್ಥೆ, ಬಾಷ್ ಕಂಪನಿಯ ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಂ, ಎ.ಐ ತಂತ್ರಜ್ಞಾನಗಳುಳ್ಳ ಕ್ಯಾಮೆರಾ, ಭಕ್ತರ ನಿಖರ ಲೆಕ್ಕಹಾಕಿ ಕ್ಯೂ ನಿಯಂತ್ರಣ ವ್ಯವಸ್ಥೆ ಇಲ್ಲಿದೆ. ಭಕ್ತರ ದಟ್ಟಣೆ ಹೆಚ್ಚಾದ ಸಂದರ್ಭಗಳಲ್ಲಿ ಶ್ರೀಕ್ಷೇತ್ರದಿಂದ ಫಲಾಹಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಶ್ರೀ ಸಾನಿಧ್ಯದ ಹೊಸ ಕ್ಯೂ ಕಾಂಪ್ಲೆಕ್ಸ್‌ನಲ್ಲಿ 650 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಲಾಗಿದೆ. ಜೊತೆಗೆ ವಿದ್ಯುತ್ ಮತ್ತು ನೀರು ಪೋಲಾಗುವುದನ್ನು ತಪ್ಪಿಸಲು ಮಾನಿಟರಿಂಗ್ ತಂತ್ರಜ್ಞಾನ ಒಳಗೊಂಡ ಬಿಲ್ಡಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ ಬಳಸಲಾಗುತ್ತಿದೆ. ನೀರಿನ ಪುನರ್ಬಳಕೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗೂ ಶ್ರೀ ಸಾನಿಧ್ಯ ಮಾದರಿಯಾಗಿದೆ.
ದೇಶದಲ್ಲೇ ವ್ಯವಸ್ಥೆಯಲ್ಲಿ ಅಪರೂಪವಾಗಿರುವ ಶ್ರೀ ಸಾನಿಧ್ಯದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ಷೇಮವನ ನೇಚರ್‌ಕೇರ್‌ನ ಸಿಇಓ ಶ್ರದ್ಧಾ ಅಮಿತ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎವಿ ಶೆಟ್ಟಿ, ಲಕ್ಷ್ಮೀನಾರಾಯಣ್ ರಾವ್ ಮತ್ತಿತರ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
