ಸರಕಾರಿ ಸ್ಥಳದಲ್ಲಿ ಕಟ್ಟಿದ ಮನೆ ಮತ್ತು ಶೆಡ್‌ಗಳ ತೆರವು: ಸಂಸದ ಮತ್ತು ಶಾಸಕರ ನೇತೃತ್ವದಲ್ಲಿ ತಹಸೀಲ್ದಾರರ ವಿರುದ್ಧ ಬೃಹತ್ ಪ್ರತಿಭಟನೆ

ಸರಕಾರಿ ಸ್ಥಳದಲ್ಲಿ ಕಟ್ಟಿದ ಮನೆ ಮತ್ತು ಶೆಡ್‌ಗಳ ತೆರವು: ಸಂಸದ ಮತ್ತು ಶಾಸಕರ ನೇತೃತ್ವದಲ್ಲಿ ತಹಸೀಲ್ದಾರರ ವಿರುದ್ಧ ಬೃಹತ್ ಪ್ರತಿಭಟನೆ


ಕುಂದಾಪುರ: ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು ಎನ್ನಲಾದವರ, ಹೆಗ್ಗುಂಜೆ ಗ್ರಾಮದ ಐದು ಬಡ ಕುಟುಂಬಗಳ ಮನೆ ಮತ್ತು ಶೆಡ್ಡುಗಳನ್ನು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಬ್ರಹ್ಮಾವರ ತಹಶಿಲ್ದಾರರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ಬ್ರಹ್ಮಾವರ ತಹಶಿಲ್ದಾರರ ಕಚೇರಿ ಬಳಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಹೆಗ್ಗುಂಜೆಯ ಸ್ಥಳೀಯರು ಹಲವಾರು ಮಂದಿ ಭಾಗಿಯಾಗಿದ್ದರು. ನ್ಯಾಯ ಸಿಗುವ ತನಕ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಹೆಗ್ಗುಂಜೆ ಗ್ರಾಮದ ಸರಕಾರಿ ಸ್ಥಳದಲ್ಲಿದ್ದ ಮನೆ ಮತ್ತು ಶೆಡ್ಡುಗಳನ್ನು ಏಕಾಏಕಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ತಂದು ಅಲ್ಲಿದ್ದ ಎಲ್ಲಾ ಮನೆಗಳನ್ನ ಧ್ವಂಸಗೊಳಿಸಿದ್ದಾರೆ. 

ಸರಕಾರಿ ಜಾಗದಲ್ಲಿ ಹಲವಾರು ಮನೆ ಕಟ್ಟಿಕೊಂಡವರಿದ್ದಾರೆ. ಆದರೆ, 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಇವರ ಮನೆಗಳನ್ನು ಕೆಡವಿದ್ದು ನಿಜಕ್ಕೂ ಆಕ್ಷೇಪಾರ್ಹ. ನಮ್ಮ ಜಿಲ್ಲೆಯಲ್ಲಿ 48 ಸಾವಿರ 94ಸಿ ಮತ್ತು ಸಿಸಿ ಅರ್ಜಿಗಳು ಬಾಕಿ ಇವೆ. ಇದರಲ್ಲಿ ಸುಮಾರು 38 ಸಾವಿರ ಅರ್ಜಿಗಳಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಬೆಳ್ಳ ನಾಯ್ಕ ಮತ್ತು ಶೇಖರ ನಾಯ್ಕರ ಮನೆ ತೆರವುಗೊಳಿಸಿದ್ದು ಈ ಬಾಕಿ ಇರುವ 38 ಸಾವಿರ ಅರ್ಜಿಗಳನ್ನೂ ತೆರವುಗೊಳಿಸಿದ ರೀತಿಯೇ ಆಗಿದೆ ಎಂದು ಸಂಸದರಾದ ಕೊಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ಅದ್ಯಕ್ಷ ರಾಜೀವ್ ಕುಲಾಲ್, ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ,  ಹೆಗ್ಗುಂಜೆ ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ ಆಕ್ರೋಶವನ್ನು ಹೊರಹಾಕಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಡುಬಿ ಸಮಾಜದ ಜಿಲ್ಲಾ ಸಂಘಟನಾ ಅಧ್ಯಕ್ಷ ಪ್ರಭಾಕರ್, ಶಂಕರ ಪೂಜಾರಿ, ವಿಠಲ ಪೂಜಾರಿ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಮುಖಂಡ ರತ್ನಾಕರ ಶೆಟ್ಟಿ, ಉಮೇಶ್ ನಾಯ್ಕ್, ನಳಿನಿ ಪ್ರದೀಪ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆಯವರು ಮಾತನಾಡಿ, ಈ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ಓರ್ವ ವ್ಯಕ್ತಿ ಈ ಸರ್ಕಾರಿ ಸ್ಥಳವನ್ನೇ ಅನಧಿಕೃತವಾಗಿ ಮಾರಾಟ ಮಾಡಿದ್ದು, ಸರಿಯಾದ ಪತ್ರವನ್ನು ಮಾಡಿರುವುದಿಲ್ಲ. ಕಾರಣ ಭೂ ಕಬಳಿಕೆ ಪ್ರಕರಣ ದಾಖಲಾಗಿರುವುದರಿಂದ ನಾವು ಸರ್ಕಾರದ ಆದೇಶದ ಪ್ರಕಾರ ಧ್ವಂಸ ಮಾಡಲು ಮುಂದಾಗಿದ್ದೆವೆ ಎಂದು ತಿಳಿಸಿದರು.

ಎಡಿಸಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನ ಪಡೆದುಕೊಂಡಿದ್ದಾರೆ. ಪ್ರತಿಭಟನಾಕಾರರು ಒಂದು ವಾರದ ಗಡುವು ಕೊಟ್ಟಿದ್ದಾರೆ. ಅವರ ಬೇಡಿಕೆಗಳು ಏನೆಂದರೆ,  ತಹಶೀಲ್ದಾರ್ ರನ್ನು ಅಮಾನತುಗೊಳಿಸಬೇಕು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೊಡುವುದು. ಸೂಕ್ತ ವಸತಿ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

ಗೂಗಲ್ ನಕ್ಷೆಯಲ್ಲೂ, ಈ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಅರಣ್ಯ ಇದ್ದುದು ಗೋಚರಿಸುತ್ತಿದ್ದು, ಇದು ತಹಶೀಲ್ದಾರ್ ಹೇಳಿಕೆಗೆ ಪೂರಕವಾಗಿದೆ. ಕಾನೂನಾತ್ಮಕ ಕಾರ್ಯಾಚರಣೆಯಲ್ಲಿ ಇದೀಗ ಬೇರೆ ಬೇರೆ ಹಿತಾಸಕ್ತಿಗಳೂ ಬೆರೆತು, ಪ್ರಕರಣ ಗೋಜಲಾಗುತ್ತಾ, ಬೆಳೆಯುತ್ತಾ ಸಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article