ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್‌ಗೆ ಅಭಿಮತ ಕೀರ್ತಿ ಕಲಶ ಗೌರವ
Wednesday, January 21, 2026
ಕುಂದಾಪುರ: ಗಿಳಿಯಾರು ಜನಸೇವಾ ಟ್ರಸ್ಟ್ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಜನಾದರಣೆ ಗಳಿಸಿದವರಿಗೆ ನೀಡುವ ‘ಕೀರ್ತಿ ಕಲಶ’ ಮಹಾ ಗೌರವವನ್ನು ಈ ಬಾರಿ ಮಹಾರಾಷ್ಟ್ರದ ನಿವೃತ್ತ ಪೋಲಿಸ್ ಅಧಿಕಾರಿ ಕನ್ನಡಿಗ, ದಯಾ ನಾಯಕ್ ಅವರಿಗೆ ನೀಡಲಾಗುತ್ತದೆ ಎಂದು ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃತ್ತಿಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಮಾಜ ಗುರುತಿಸುವ ಸಾಧನೆ ಮಾಡಿದ ಮೂವರು ಸಾಧಕರಿಗೆ ಪ್ರತಿ ವರ್ಷವೂ ನೀಡುವ ‘ಯಶೋಗಾಥೆ’ ಪುರಸ್ಕಾರವನ್ನು ಈ ಬಾರಿ ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, 25 ವರ್ಷಗಳಿಂದ ಸುದೀರ್ಘ ಕಲಾಸೇವೆ ಮಾಡುತ್ತಿರುವ ಯಶಸ್ವಿ ಕಲಾವೃಂದ ಹಾಗೂ ಸಾವಿರಾರು ಮಕ್ಕಳನ್ನು ಭೂವಿಗೆ ತಂದಿರುವ ಬಸ್ರೂರಿನ ಹಿರಿಯ ಸೂಲಗಿತ್ತಿ ಲಕ್ಷ್ಮಿ ಪೂಜಾರಿ ಗುಂಡಿಗೋಳಿ ಅವರಿಗೆ ನೀಡಲಾಗುತ್ತದೆ.
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫೆ.14 ರಂದು ಸಂಜೆ 6 ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಉತ್ಸವ ‘ಅಭಿಮತ ಸಂಭ್ರಮ 2026’ರಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.