ಭಾರೀ ಗಾತ್ರದ ಸರ್ಪ ಸೆರೆ
Wednesday, January 28, 2026
ಕುಂದಾಪುರ: ಕೋಟೇಶ್ವರದ ದೊಡ್ಡೋಣಿ ರಸ್ತೆಯಲ್ಲಿನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಕಂಡುಬಬಂದ ದೊಡ್ಡ ಗಾತ್ರದ ನಾಗರ ಹಾವನ್ನು ಪರಿಸರದ ಖ್ಯಾತ ಉರಗತಜ್ಞ ಶ್ರೀಧರ ಐತಾಳ್ ಕಾರ್ಯಾಚರಣೆ ನಡೆಸಿ ಹಿಡಿದರು.
ರಾತ್ರಿ ವೇಳೆ ಮನೆಯಲ್ಲಿ ಹಾವಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಐತಾಳರಿಗೆ ಕರೆ ಮಾಡಿದರು. ಸ್ಥಳಕ್ಕಾಗಮಿಸಿದ ಶ್ರೀಧರ ಐತಾಳ್ ಚಾಕಚಕ್ಯತೆಯಿಂದ ಹಾವನ್ನು ಹಿಡಿದು ಬಕೆಟಿಗೆ ತುಂಬಿದರು.
ಬರೋಬ್ಬರಿ ಎಂಟು ಅಡಿ ಉದ್ದದ ಭಾರೀ ಗಾತ್ರದ ಈ ಗೋಧಿ ನಾಗರ ಹಾವು ತಪ್ಪಿಸಿಕೊಳ್ಳಲು ಹೆಣಗಾಡಿದರೂ ಅದರ ಆಟ ಸಾಗದೆ ಐತಾಳರ ಕೈಯ್ಯಲ್ಲಿ ಬಂಧಿಯಾಯಿತು. ರಾತ್ರಿಯೇ ಅದನ್ನು ದೂರ ಒಯ್ದು ಸುರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಶ್ರೀಧರ ಐತಾಳರಿಗೆ ಕೃತಜ್ಞತೆ ಸಲ್ಲಿಸಿದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಉರಗ ತಜ್ಞ ಶ್ರೀಧರ ಐತಾಳರು ಇದುವರೆಗೂ ಕಾಳಿಂಗ ಸರ್ಪವೂ ಸೇರಿದಂತೆ ವಿವಿಧ ಜಾತಿಯ ಆರು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಗಾಯಗೊಂಡ ಹಾವುಗಳಿಗೆ ಚಿಕಿತ್ಸೆ ಮಾಡಿ ಗುಣಪಡಿಸುವುದರಲ್ಲೂ ಐತಾಳರು ಪರಿಣತರಾಗಿದ್ದಾರೆ.