ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ಸುದ್ದಿ ತಿರುಚುವ ಮನಃಸ್ಥಿತಿ ಮಾಧ್ಯಮಲೋಕಕ್ಕೆ ಅಪಾಯ: ಜಯಪ್ರಕಾಶ್ ಹೆಗ್ಡೆ


ಕುಂದಾಪುರ: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಾರ್ವಕಾಲಿಕ ದಾಖಲೆಗಳಾಗಿ ಉಳಿಯುತ್ತವೆ, ಹಾಗೂ ಸುದ್ದಿಯಲ್ಲಿ ತಪ್ಪುಗಳು ನಡೆದರೆ ಅದನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಸುದ್ದಿಗಳನ್ನು ತಿರುಚುವ ಮನಃಸ್ಥಿತಿ ಮಾಧ್ಯಮಲೋಕಕ್ಕೆ ಅಪಾಯವಾಗಲಿದೆ. ಹೀಗಾಗಿ ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಸಾಸ್ತಾನ ಪಾಂಡೇಶ್ವರದ ಹೋಟೆಲ್ ಕೋಸ್ಟಲ್ ಪ್ಯಾರಡೈಸ್ ಅನುಗ್ರಹ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿ ಮಾತನಾಡಿ, ಪತ್ರಿಕಾರಂಗದ ಬಗ್ಗೆ ಸಮಾಜದಲ್ಲಿ ಗೌರವವಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಈ ಸಂದರ್ಭ ವಡ್ಡರ್ಸೆಯವರ ಒಡನಾಡಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೈಕಂಪಾಡಿಯವರು, ವಡ್ಡರ್ಸೆಯವರೊಂದಿಗಿನ ಒಡನಾಟ ಒಂದು ವಿಶ್ವವಿದ್ಯಾಲಯದ ಪಾಠವಿದ್ದಂತೆ. ಬಡವರು, ಹಿಂದುಳಿದವರ ಬಗ್ಗೆ ಅವರಿಗಿದ್ದ ಪ್ರೀತಿ, ಸಮಾಜ ಪರಿವರ್ತನೆಯಲ್ಲಿ ಅವರಿಗಿದ್ದ ಕಾಳಜಿ ಅಪಾರವಾದದ್ದು. ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಪಾಲಿನ ಸೌಭಾಗ್ಯ ಎಂದರು ಹಾಗೂ ‘ಮುಂಗಾರು’ವಿನ ನೆನಪುಗಳನ್ನು ಬಿಚ್ಚಿಟ್ಟರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಶುಭ ಹಾರೈಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಚಿತ್ತೂರು ಪ್ರಭಾಕರ ಆಚಾರ್ಯ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಪ್ರವೀಣ್ ಮುದ್ದೂರು, ಮೋಹನ್ ಉಡುಪ ಅವರನ್ನು ಗೌರವಿಸಲಾಯಿತು.

ಬ್ರಹ್ಮಾವರ ಬಂಟರ ಸಂಘದ ಸಂಚಾಲಕ ಬಿ. ಭುಜಂಗ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಆಸ್ಟ್ರೋ ಮೋಹನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಇದ್ದರು.

ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಕಾರ್ಯಕ್ರಮ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.   ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ ಕಿರಣ್ ತುಂಗ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article