ಅಪರೂಪದ ಕುಂದಬಾರಂದಾಡಿಯ ಮಹಿಷಮರ್ಧಿನಿ ಶಿಲ್ಪ
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಮಹಿಷಮರ್ಧಿನಿ ದೇವಾಲಯವು, ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯ. ಎರಡನೇ ಆಳುವರಸನ ಬೆಳ್ಮಣ್ ತಾಮ್ರಪಟ ಶಾಸನವು ಬೆಳ್ಮಣ್‌ನ ದೇವಿಯನ್ನು ವಿಂಧ್ಯವಾಸಿನಿ ಹಾಗೂ ಮಹಾಮುನಿ ಸೇವಿತೆ ಎಂದು ಕೊಂಡಾಡಲಾಗಿದೆ.
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕುಂದಬಾರಂದಾಡಿಯ ಜೀರ್ಣಾವಸ್ಥೆಯಲ್ಲಿರುವ ದೇವಾಲಯದಲ್ಲಿ ಒಂದು ಅಪರೂಪದ ಮಹಿಷಮರ್ಧಿನಿಯ ಶಿಲ್ಪ ಕಂಡುಬಂದಿದೆ ಎಂದು ಪುರಾತತ್ತ್ವ ವಿದ್ವಾಂಸ ಹಾಗೂ ಆದಿಮ ಕಲಾ ಟ್ರಸ್ಟ್ (ರಿ,). ಉಡುಪಿ ಇದರ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಬಾರಂದಾಡಿಯ ಮಹಿಷಮರ್ಧಿನಿಯು, ಆರುಕೈಗಳನ್ನು ಹೊಂದಿದ್ದು, ಬಲಭಾಗದ ಮೊದಲ ಕೈಯಲ್ಲಿ, ತ್ರಿಶೂಲ, ಎರಡನೇ ಕೈಯಲ್ಲಿ ಖಡ್ಗ, ಮೂರನೇ ಕೈಯಲ್ಲಿ ಗಧೆಯನ್ನು ಹಿಡಿದಿದ್ದಾಳೆ. ಎಡಭಾಗದ ಮೊದಲಕೈಯನ್ನು ಮಹಿಹಿಷನ ಬೆನ್ನಿನ ಮೇಲೆ ಇರಿಸಲಾಗಿದೆ, ಎರಡನೇಕೈ ತುಂಡಾಗಿದ್ದು, ಮೂರನೇ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದಾಳೆ. ತನ್ನ ಬಲಗಾಲನ್ನು ಮಹಿಷನ ತಲೆಯ ಮೇಲೆ ಇಟ್ಟು ಮೆಟ್ಟಿ ತ್ರಿಶೂಲದಿಂದ ಆಳವಾಗಿ ಮಹಿಷನ ದೇಹವನ್ನು ಇರಿದಂತೆ ಚಿತ್ರಿಸಲಾಗಿದೆ.
ಮಹಿಷಮರ್ಧಿನಿಯ ಮುಖಭಾವ ವಿಶಿಷ್ಠವಾಗಿದೆ. ದಪ್ಪ ತುಟಿ, ದಪ್ಪನೆಯ ಮೂಗು, ಉಬ್ಬಿಕೊಂಡಿರುವ ಕಣ್ಣಾಲಿಗಳು ಅಗಲವಾದ ಮುಖ ಸ್ಥಳೀಯ ಭೂತಾರಾಧನೆಯ ದೈವಗಳ ಮುಖಭಾವವನ್ನು ನೆನಪಿಸುತ್ತದೆ. ಕರಂಡಮುಕುಟವನ್ನು ಧರಿಸಿರುವ ದೇವಿಯು ಸ್ಥಳೀಯ ಸಂಸ್ಕೃತಿ ಮತ್ತು ಭಾರತೀಯ ಶಿಲ್ಪ ಶೈಲಿಯ ಸುಂದರ ಸಂಯೋಜನೆಯಾಗಿದೆ. ದೇವಿಯ ಗಧೆಯ ಕೆಳಭಾಗದಲ್ಲಿ ಒಂದು ಚಿಕ್ಕ ಸ್ತ್ರೀ ಶಿಲ್ಪವಿದ್ದು ಅದು ಬಹುಶಃ ಮಹಿಷನ ಪತ್ನಿಯ ಶಿಲ್ಪವಾಗಿರಬಹುದು?
ಕುಂದಬಾರಂದಾಡಿಯ ಮಹಿಷಮರ್ಧಿನಿ ದೇವಾಲಯವು ದಕ್ಷಿಣ ದಿಕ್ಕಿನಲ್ಲಿದೆ. ಉತ್ತರ, ಪೂರ್ವ ಮತ್ತು ಪಶ್ಚಿಮದಲ್ಲಿ ಇನ್ನು ಮೂರು ಮಹಿಷಮರ್ಧಿನಿ ದೇವಾಲಯಗಳಿವೆ. ಐದನೆಯದು ಪುರುಷ ಶಕ್ತಿ ಅಂದರೆ ಶಿವದೇವಾಲಯ ಆದ್ದರಿಂದ ಕುಂದಬಾರಂದಾಡಿ ಮಹಿಷಮರ್ಧಿನಿ ದೇವಾಲಯಗಳು ಪಂಚದುರ್ಗಾ ಪರಂಪರೆಗೆ ಸೇರಿದ ದೇವಾಲಯಗಳ ಗುಚ್ಛವಾಗಿದ್ದು, ನಿಸರ್ಗದ ಪಂಚತತ್ವದ ಸಂಕೇತವಾಗಿವೆ. ಕುಂದಬಾರಂದಾಡಿ ಮಹಿಷಮರ್ಧಿನಿ ದಕ್ಷಿಣ ದಿಕ್ಕಿನಲ್ಲಿರುವುದರಿಂದ ಆಕೆ, ರಾಕ್ಷಸೀ ಸತ್ವದ ಸಂಕೇತವಾಗಿದ್ದಾಳೆ.
ಈ ಸಂಶೋಧನಗೆ ನೆರವು ಒದಗಿಸಿದ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಂದ್ರ ಪೂಜಾರಿ, ಕಾರ್ಯದರ್ಶಿ ರಘುರಾಮ ಪೂಜಾರಿ, ಸೀತಾರಾಮ ಪೂಜಾರಿ, ಸಂಜೀವ ಬಿಲ್ಲವ ಹಾಗೂ ಅರ್ಚಕ ಚೆನ್ನಕೇಶವ ಉಪಾಧ್ಯಾಯ, ತಂತ್ರಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಹಾಗೂ ಆದಿಮ ಕಲಾ ಸಂಶೋಧನಾ ತಂಡದ ಮುರುಳೀಧರ ಹೆಗಡೆ, ಶ್ರೇಯಸ್, ಗೌತಮ್ ಮತ್ತು ಭಾನುಮತಿಯವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.