ಕಳೆದ 11 ವರ್ಷದಲ್ಲಿ ಬಿಜೆಪಿ ಯಾವ ಜನಪರ ಮಸೂದೆ ಜಾರಿಗೆ ತಂದಿದೆ..?: ಗುಂದುರಾವ್ ಪ್ರಶ್ನೆ
ಅವರು ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಯಾವುದೇ ಅಭಿವೃದ್ಧಿ ಪರ ಕೆಲಸ ಮಾಡುವುದಿಲ್ಲ. 20 ವರ್ಷಗಳಿಂದ ಕಾರ್ಮಿಕರಿಗೆ ಉಪಯುಕ್ತವಾಗಿದ್ದ, ಉದ್ಯೋಗ ಖಾತ್ರಿ (ನರೇಗಾ) ಯೋಜನೆಯನ್ನು ವಿಬಿಜಿ ರಾಮ್‌ಜಿ ಎಂಬ ವಿಚಿತ್ರ ಹೆಸರನ್ನು ಇಟ್ಟು, ಸದನದಲ್ಲಿ ಕೇವಲ 8 ಗಂಟೆಗಳ ಕಾಲ ಕಾಟಚಾರಕ್ಕೆ ಚರ್ಚಿಸಿ, ಸರ್ವಾಧಿಕಾರಿಯಂತೆ ಸೂಕ್ತವಾಗಿ ಲೋಪದೋಷಗಳ ಬಗ್ಗೆ ಚರ್ಚಿಸದೇ, ಮಸೂದೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಯೊಂದಿಗೆ ಕಾರ್ಮಿಕರ ಕೆಲಸಕ್ಕೆ ಚಪ್ಪಡಿಕಲ್ಲು ಹಾಕಿದಂತಾಗಿದೆ ಎಂದರು.
ಇದರಿಂದಾಗಿ ಕೋಟ್ಯಾಂತರ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ. ಇಲ್ಲಿಯ ತನಕ ನರೇಗಾ ಯೋಜನೆಯಡಿಯಲ್ಲಿ ವೇತನ ಸಹಿತ ಶೇ.90 ರಷ್ಟು ಕೇಂದ್ರ ಸರ್ಕಾರ ಬರಿಸುತ್ತಿದ್ದು, ರಾಜ್ಯ ಸರ್ಕಾರ ಸಾಮಾಗ್ರಿಗಳಿಗಾಗಿ ಶೇ.25 ರಷ್ಟನ್ನು ಮಾತ್ರ ನೀಡಲು ಅವಕಾಶವಿದ್ದು, ಈಗ ನೂತನವಾಗಿ ಜಾರಿಗೊಳಿಸಿದ ವಿಬಿಜಿ ರಾಮ್‌ಜಿ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ರಷ್ಟು ನೀಡಬೇಕು ಅದರಲ್ಲೂ ವೇತನವನ್ನೂ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಆದೇಶ ಹೋರಡಿಸಿರುವುದು ಸರಿಯಲ್ಲ. ಗ್ಯಾರಂಟಿ ಯೋಜನೆಯಾಗಿದ್ದ ನರೇಗಾ ಈಗ ಆಯ್ಕೆಯಾಗಿದ್ದು, ಇದನ್ನು ಮುಚ್ಚುವ ಪ್ರಯತ್ನ ಎಂದು ಹೇಳಿದರು.
ಗ್ರಾಮೀಣ ಖಾತ್ರಿ ಯೋಜನೆಯ ಮೂಲಕ ಸಮಾಜದಲ್ಲಿ ಬದಲಾವಣೆಯೊಂದಿಗೆ ಗ್ರಾಮದ ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂದು ತಿರ್ಮಾನಿಸುತ್ತಿದ್ದು, ಈಗ ಕೇಂದ್ರ ಸರ್ಕಾರವೇ ಯಾವ ಕೆಲಸ ಮಾಡಬೇಕು ಎಂದು ತಿರ್ಮಾನಿಸುತ್ತದೆ. ರಾಜ್ಯ ಸರ್ಕಾರಗಳು ಹಣ ನೀಡದಿದ್ದಲ್ಲಿ ಈ ಯೋಜನೆಯು ಮುಂದಕ್ಕೆ ಸಾಗಲು ಸಾಧ್ಯವಾಗುವುದಿಲ್ಲವಾದುದರಿಂದ ಎಂದರು.
ದೇಶದಲ್ಲಿ 12 ಕೋಟಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಶೇ.53 ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 71.18 ಲಕ್ಷ ಜನರು ಕೆಲಸ ಮಾಡುತ್ತಿದ್ದು, ದ.ಕ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ ಅವರ ಬದುಕಿಗೆ ಕೇಂದ್ರ ಸರ್ಕಾರ ಬೆಂಕಿ ಹಾಕಿದೆ ಎಂದು ದೂರಿದರು.
ವಿಬಿಜಿ ರಾಮ್‌ಜಿ ಯೋಜನೆಯ ಮೂಲಕ ಗ್ರಾಮ ಪಂಚಾಯತ್‌ಗೆ ಇದ್ದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದು, ಬಡಜನರಿಗಾಗಿ ಇದ್ದ ಯೋಜನೆಯ ಮೇಲೆ ಮೋದಿಯ ಕೆಟ್ಟ ದೃಷ್ಟಿ ಬಿದ್ದದ್ದೇ ಇದಕ್ಕೆ ಕಾರಣ, ಇದಕ್ಕೆ ಪೂರಕವಾಗಿ ಅವರ ಸಂಪುಟದ ಸದಸ್ಯರು ಸುಳ್ಳು ಸುದ್ದಿಗಳನ್ನು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲಿದೆ ಗೋಡ್ಸೆ ಗಾಂಧಿಜೀಯನ್ನು ಕೊಂದ. ಈಗ ಮೋದಿ ಗಾಂಧಿಜೀಯ ಹೆಸರನ್ನು ಕೊಂದರು ಎಂದು ಕಿಡಿಕಾರಿದರು.
ಯುಪಿಎ ಸರ್ಕಾರ ಆರ್‌ಟಿಐ, ಆರ್‌ಟಿಇ, ಕಾರ್ಮಿಕ ಕಾನೂನು ಬುಡಕಟ್ಟು ಕಾನೂನು, ಅರಣ್ಯ ವಾಸಿಗಳಿಗೆ ಕಾನೂನು, ಆಹಾರ, ಉದ್ಯೋಗಕ್ಕೆ ಕಾನೂನು ಈ ರೀತಿಯ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದು, ಮೋದಿ ಅವರು ಹೊಸ ಕಾನೂನನ್ನು ಜಾರಿಗೆ ತರುವುದು ಇರಲಿ ಅಭಿವೃದ್ಧಿ ಪಡಿಸುವ ಕೆಲಸಕ್ಕೂ ಕೈ ಹಾಕಲಿಲ್ಲ. ಇವರು ದೇವಲ ಹಿಂದುತ್ವ, ಹಿಂದು-ಮುಸ್ಲಿಂ, ಪಾಕಿಸ್ತಾನ ಎಂದು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಅದಾನಿ, ಅಂಬಾನಿಗೆ ಆಸ್ತಿ ನೀಡಲಾಗುತ್ತದೆ. ಆದರೆ ಬಡವರಿಗೆ ಕೊಡಲು ಆಗುವುದಿಲ್ಲ ಎಂದು ದೂರಿದ ಅವರು ಇದರ ವಿರುದ್ಧ ದೇಶಾಧ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಐವನ್ ಡಿಸೋಜ, ಪದ್ಮರಾಜ್ ಪೂಜಾರಿ, ಶಶಧರ್ ಹೆಗ್ಡೆ, ಎಸಿ ವಿನಯ್‌ರಾಜ್, ಟಿ.ಕೆ. ಸುಧೀರ್, ಸುಭೋದ್ ಆಳ್ವ, ಲಾವಣ್ಯ ಬಳ್ಳಾಲ್, ವಿಶ್ವಾಸ್ ದಾಸ್, ಮನುರಾಜ್, ವಿಕಾಶ್ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.