ಜ.12 ರಿಂದ 16 ರವರೆಗೆ 85ನೇ ಅಖಿಲ ಭಾರತ ಪುರುಷ ಹಾಗೂ ಮಹಿಳೆಯರ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್
ಈ ಕ್ರೀಡಾಕೂಟ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಇದರಲ್ಲಿ ದೇಶದ 312ಕ್ಕೂ ಅಧಿಕ ವಿಶ್ವವಿದ್ಯಾಲಯಗಳ 4,288 ಅಥ್ಲೀಟ್‌ಗಳು ಹಾಗೂ ಸುಮಾರು 1,000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ ಆಳ್ವ ಭಾನುವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಉದ್ಘಾಟನಾ ಸಮಾರಂಭ:
ಜ.12 ರಂದು ಸಂಜೆ 4.30ಕ್ಕೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಫರೀದ್ ಉದ್ಘಾಟಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಮಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅಧ್ಯಕ್ಷತೆ ವಹಿಸಲಿದ್ದು, ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಧ್ವಜಾರೋಹಣ ನೆರೆವೇರಿಸಲಿದ್ದಾರೆ.
ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯರು ಹಾಗೂ ಶಾಸಕರಾದ ಡಾ. ಶ್ರೀ ನಿವಾಸ ಎನ್‌ಟಿ ಕೂಡ್ಲಿಗಿ, ಎಚ್‌ಸಿ ಬಾಲಕೃಷ್ಣ ಮಾಗಡಿ, ರಿಜ್ವಾನ್ ಅರ್ಷದ್, ಪುಟ್ಟಣ್ಣ ಹಾಗೂ ಗೋವಿಂದ ರಾಜ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ ಬಿಎಲ್ ಸುಜಾತಾ ರಾಥೋಡ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದರು.
6ನೇ ಬಾರಿ ಆಳ್ವಾಸ್ ಆತಿಥ್ಯ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ 6ನೇ ಬಾರಿಗೆ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸುತ್ತಿದೆ. ಈ ಹಿಂದೆ 72, 75 ಹಾಗೂ 80ನೇ ಕ್ರೀಡಾಕೂಟವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ 79 ಹಾಗೂ 81 ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿತ್ತು. ಇದೀಗ 85ನೇ ಕ್ರೀಡಾಕೂಟವನ್ನು ರಾಜೀವ್ ಗಾಂಧಿವಿಜ್ಞಾನ ವಿವಿಗಳ ಆಶ್ರಯದಲ್ಲಿ ೪ನೇ ಬಾರಿ ಆಯೋಜಿಸಲಾಗುತ್ತಿದೆ.
ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ವಿಶೇಷತೆ:
ರಾಷ್ಟ್ರದ 312 ವಿಶ್ವವಿದ್ಯಾಲಯಗಳ ಸುಮಾರು 4,288 ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಸುಮಾರು 1,000 ಕ್ರೀಡಾಧಿಕಾರಿಗಳು ಭಾಗವಹಿ ಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಎಲ್ಲರಿಗೂ ಆನ್‌ಲೈನ್ ನೋಂದಣಿ ಸೌಲಭ್ಯವನ್ನು ನೀಡಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಐದು ದಿನಗಳ ಕ್ರೀಡಾಕೂಟದಲ್ಲಿ ತಲಾ ಎರಡು ವಿಭಾಗದಲ್ಲಿ 47 ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಕೂಟಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳಿಗೆ ಆಳ್ವಾಸ್ ಸಂಸ್ಥೆಯಿಂದ ರೈಲ್ವೆ ನಿಲ್ದಾಣದಿಂದ ಮೂಡುಬಿದಿರೆಗೆ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ.
ಸುಸಜ್ಜಿತ ಸಿಂಥಟಿಕ್ ಟ್ರ್ಯಾಕ್‌ನಲ್ಲಿ ಕ್ರೀಡಾಕೂಟವು ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಆಕರ್ಷಕವಾಗಿ ನಡೆಯಲಿದೆ.
ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ರೀಡಾಕೂಟವನ್ನು ಖೇಲೋ ಇಂಡಿಯಾ ಹಾಗೂ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯಗಳ ಕ್ರೀಡಾಕೂಟಕ್ಕೆ ಮಾನದಂಡವಾಗಿ ಪರಿಗಣಿಸಲಾಗುವುದು. ಪ್ರತಿದಿನ ರಾತ್ರಿ 7 ಗಂಟೆಗೆ ಅದ್ಧೂರಿಯಾದ ವಿಜಯ ವೇದಿಕೆಯಲ್ಲಿ ಪದಕ ವಿಜೇತರನ್ನು ಗೌರವಿಸಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 11 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ 58 ಕ್ರೀಡಾಪಟುಗಳು ಭಾಗಿಯಾಗಿ ಪದಕಗಳನ್ನು ಗೆದ್ದಿರುವ ಹೆಮ್ಮೆಯ ಸಂಸ್ಥೆಯಲ್ಲಿ ಕ್ರೀಡಾಕೂಟ ಆಯೋಜನೆಗೊಂಡಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ವಿಜೇತರಾದ ಟ್ರೋಫಿಗಳ ಆಕರ್ಷಕ ‘ಟ್ರೋಪಿ ಡಿಸ್‌ಪ್ಲೇ’ ಇರಲಿದೆ.
ಈ ಹಿಂದೆ ಆಳ್ವಾಸ್‌ನಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ನಡೆದ 3 ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ 48 ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಿರಿಮೆ ಇದೆ.
ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ:
ಕ್ರೀಡಾಕೂಟದ ಸ್ಪರ್ಧೆಗಳು ಜನವರಿ 12ರಂದು ಬೆಳಗ್ಗೆ 6.30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಸಂಜೆ 4.30ಕ್ಕೆ ಭವ್ಯ ಮೆರವಣಿಗೆ ನಡೆಯಲಿದೆ. ನಮ್ಮ ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ಕಲಾತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಪಥಸಂಚಲನದ ನಂತರ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಒಟ್ಟು 3.75 ಕೋಟಿ ರೂ. ಬೇಕಿದ್ದು, ರಾಜೀವ್‌ಗಾಂಧಿ ಆರೋಗ್ಯ ವಿವಿ 1 ಕೋಟಿ ರೂ. ನೆರವು ನೀಡುತ್ತಿದೆ ಎಂದರು.
ಉಚಿತ ಊಟ ಹಾಗೂ ವಸತಿ ಸೌಲಭ್ಯ:
ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಯೋಜಕರ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕ್ರೀಡಾಪಟುಗಳ ಅನುಕೂಲಕ್ಕಾಗಿ ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕ್ರೀಡಾಕೂಟಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ.
ವಿಜೇತರಿಗೆ 20 ಲಕ್ಷ ರೂ.ಗೂ ಅಧಿಕ ಮೊತ್ತದ ನಗದು ಪುರಸ್ಕಾರ:
ವಿಜೇತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಗದು ಪುರಸ್ಕಾರ ಪ್ರಥಮ ಸ್ಥಾನ ಪಡೆದವರಿಗೆ 15,000 ರೂ. ದ್ವಿತೀಯ 10,000 ರೂ. ಹಾಗೂ ತೃತೀಯ 5,000 ರೂ., ಕೂಟ ದಾಖಲೆ ನಿರ್ಮಿಸಿದವರಿಗೆ 25,000 ರೂ., ಸಮಗ್ರ ಪ್ರಶಸ್ತಿ ವಿಜೇತ ತಂಡಕ್ಕೆ 50,000 ರೂ., ರನ್ನರ್ ಅಪ್ 30,000 ರೂ., ತೃತಿಯ ಸ್ಥಾನ 20,000 ರೂ. ನಗದು ಪುರಸ್ಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಪ್ರೊ.ಡಾ.ಇಫ್ತಿಕಾರ್ ಆಲಿ, ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್, ಸೆನೆಟ್ ಸದಸ್ಯೆ ಡಾ.ವೈಶಾಲಿ ಶ್ರೀಜಿತ್, ವಿವಿ ಉಪ ಕುಲಪತಿ ಡಾ. ಬಿ. ವಸಂತ ಶೆಟ್ಟಿ ಇದ್ದರು.