126 ಮಕ್ಕಳಿಂದ ಒಂದೇ ವೇದಿಕೆಯಲ್ಲಿ ಶತಸ್ಮರಣ-ಶತನಮನ-ಚೆಲ್ಡುವಾಲೆ ಭಜನಾ ಸಂಪನ್ನ
Friday, January 16, 2026
ಮಂಗಳೂರು: ಮಂಗಳೂರಿನ ರಥಬೀದಿಯಲ್ಲಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ ಸೇವೆಯನ್ನು ಸಮರ್ಪಿಸಿದರು.
ಪುಟ್ಟ ಚಿಣ್ಣರಿಂದ ಹಿಡಿದು ಎಂಟನೇ ತರಗತಿಯ ತನಕ ಮಕ್ಕಳು ಶತಸ್ಮರಣ-ಶತನಮನ-ಚೆಲ್ಡುವಾಲೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಗಾಯಕ, ಗಾಯಕಿಯರು ಮಾತ್ರವಲ್ಲ ಹಾರ್ಮೋನಿಯಂ, ತಬಲ ಸಹಿತ ಸಂಗೀತ ವಾದ್ಯಗಳನ್ನು ಕೂಡ ಮಕ್ಕಳೇ ನುಡಿಸಿದ್ದು ವಿಶೇಷವಾಗಿತ್ತು. ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಮಕ್ಕಳಿಗೆ ಸ್ಮರಣಿಕೆ ನೀಡಿ ಆರ್ಶೀವದಿಸಿದರು.
ವಿದುಷಿ ಮೇಘಾ ಪೈ ಅವರ ನೇತೃತ್ವದಲ್ಲಿ ಮಕ್ಕಳು ನಿರಂತರ ಅಭ್ಯಾಸ ಮಾಡಿ, ತರಬೇತಿಯನ್ನು ಪಡೆದುಕೊಂಡು ಈ ಕಾರ್ಯಕ್ರಮಕ್ಕೆ ಅಣಿಯಾಗಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿದ್ದು, ಪ್ರತಿ ಹಾಡಿನ ಬಗ್ಗೆ ಮಾಹಿತಿಯನ್ನು ನೆರೆದ ಸಹಸ್ರಾರು ನಾಗರಿಕರಿಗೆ ನೀಡಿದರು. ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಸಿಎ ಜಗನ್ನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಶೆಣೈ ನಿರೂಪಿಸಿದರು.




