ಜ.9 ರಿಂದ 11 ರವರೆಗೆ ರಾಷ್ಟ್ರೀಯ ಮಟ್ಟದ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ ‘ಕಲಾ ಪರ್ಬ’
ಮಂಗಳೂರು: ಜಿಲ್ಲಾಡಳಿತದ ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ಮಟ್ಟದ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ ‘ಕಲಾ ಪರ್ಬ‘ ಜ.9, 10, 11ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ. ಶಿವಪ್ರಕಾಶ್ ಅವರು, ಈ ಉತ್ಸವದಲ್ಲಿ 150 ಮಳಿಗೆಗಳಲ್ಲಿ ವಿವಿಧ ಜಿಲ್ಲೆಗಳ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದು 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜತೆಗೆ ವಿವಿಧ ರಾಜ್ಯಗಳ 100ರಷ್ಟು ಶ್ರೇಷ್ಠ ಕಲಾಕೃತಿಗಳ ಪ್ರದರ್ಶನವೂ ಇರಲಿದೆ ಎಂದು ತಿಳಿಸಿದರು.
ಜ.9 ರಂದು ಸಂಜೆ 5.30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ, ಭರತನಾಟ್ಯ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಪಾಲ್ಗೊಳ್ಳಲಿದ್ದಾರೆ. ಜ.10, 11ರಂದು ಬೆಳಗ್ಗೆ 9ರಿಂದ ರಾತ್ರಿ 9.30ರವರಗೆ ‘ಕಲಾಪರ್ಬ’ ನಡೆಯಲಿದೆ. ಇದರೊಂದಿಗೆ ಜ.10 ರಂದು ಬೆಳಗ್ಗೆ 11ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಕೊಳಲು ವಾದನ, ಸಾಧಕ ಕಲಾವಿದರಿಗೆ ಸಮ್ಮಾನ, ಸಾನಿಧ್ಯ ವಿಶೇಷ ಮಕ್ಕಳಿಂದ ಯಕ್ಷಗಾನ ನಡೆಯಲಿದೆ ಎಂದರು.
ಜ.11 ರಂದು ಬೆಳಗ್ಗೆ 11ರಿಂದ ಶಿಲ್ಪಕಲಾ ಪ್ರಾತ್ಯಕ್ಷಿಕೆ, ಮೆಹಂದಿ ಬಿಡಿಸುವ ಸ್ಪರ್ಧೆ, ಬೀದಿ ನಾಟಕ, ಕಲಾ ಕಾರ್ಯಾಗಾರ, ಯಕ್ಷಗಾನ ನಡೆಯಲಿದೆ. ಸಂಜೆ 3 ಗಂಟೆಗೆ ಬಿ.ಎಸ್. ದೇಸಾಯಿ ಅವರ ಶಿಷ್ಯ ವೃಂದದವರಿಂದ 5 ಅಡಿ ಎತ್ತರ, 20 ಅಡಿ ಉದ್ದದ ಪರಿಸರ ಜಾಗೃತಿಯ ಜಲವರ್ಣ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಹೇಳಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ, ಚಿತ್ರಕಲಾ ಚಾವಡಿ ಗೌರವಾಧ್ಯಕ್ಷ ಗಣೇಶ ಸೋಮಯಾಜಿ, ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಉಪಾಧ್ಯಕ್ಷ ಶರತ್ ಹೊಳ್ಳ, ಭರತ್ ರಾಜ್ ಬೈಕಾಡಿ, ಜಿನೇಶ್ ಪ್ರಸಾದ್ ಇದ್ದರು.