NHM ನೌಕರರ ಸಂಬಳ ನೀಡದಿರುವುದು ರಾಜ್ಯ ಕಾಂಗ್ರೇಸ್ ಸರಕಾರದ ಅಸಮರ್ಥತೆಗೆ ಹಿಡಿದ ಕೈಗನ್ನಡಿ: ದ.ಕ. ಜಿಲ್ಲಾ ಬಿಜೆಪಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತರ ವೇತನ ವಿಳಂಬಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ ಅವರು ನೀಡಿರುವ ಹೇಳಿಕೆ ಸಂಪೂರ್ಣವಾಗಿ ಜವಾಬ್ದಾರಿಹೀನ, ಅರ್ಧಸತ್ಯ ಮತ್ತು ಜನರನ್ನು ದಾರಿ ತಪ್ಪಿಸುವ ಉದ್ದೇಶಪೂರಿತ ಪ್ರಯತ್ನವಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲನೆಯದಾಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಒಂದು ಕೇಂದ್ರ–ರಾಜ್ಯ ಸಹಭಾಗಿತ್ವದ ಯೋಜನೆ. ಯೋಜನೆಯ ಅನುಷ್ಠಾನ, ನೌಕರರ ನೇಮಕಾತಿ, ವೇತನ ಪಾವತಿ ಹಾಗೂ ದಿನನಿತ್ಯದ ಆಡಳಿತ ಪೂರ್ಣವಾಗಿ ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಸಮಯಕ್ಕೆ ತಕ್ಕಂತೆ ಪ್ರಸ್ತಾವನೆ ಸಲ್ಲಿಸಿ, ಆಡಳಿತಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಯಾವುದೇ ವೇತನ ವಿಳಂಬವಾಗುವ ಪ್ರಶ್ನೆಯೇ ಇರಲಿಲ್ಲ.
SNA-SPARSH ವ್ಯವಸ್ಥೆ ಜಾರಿಯಾದುದು ಹೊಸ ವಿಷಯವೇನಲ್ಲ. ಇದನ್ನು ದೇಶದಾದ್ಯಂತ ಹಲವು ರಾಜ್ಯಗಳು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದು, ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಅಸಮರ್ಥತೆಯೇ ವೇತನ ವಿಳಂಬಕ್ಕೆ ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗಿದೆ. ತಾಂತ್ರಿಕ ಬದಲಾವಣೆಗಳನ್ನು ಮುನ್ನೆಚ್ಚರಿಕೆಯಿಂದ ನಿರ್ವಹಿಸಬೇಕಿದ್ದ ರಾಜ್ಯ ಸರ್ಕಾರ ಅದರಲ್ಲಿ ವಿಫಲವಾಗಿದೆ.
08-01-2026 ರಂದು ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಎನ್ನುವುದೇ ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂಬುದಕ್ಕೆ ಸಾಕ್ಷಿ. ಆದರೆ ರಾಜ್ಯ ಸರ್ಕಾರ ಅದಕ್ಕೂ ಮೊದಲು ವ್ಯವಸ್ಥಿತ ಯೋಜನೆ ರೂಪಿಸದೇ, ನೌಕರರನ್ನು ಅನಿಶ್ಚಿತತೆಯಲ್ಲಿ ತಳ್ಳಿದ್ದು ಯಾರು ಎಂಬುದಕ್ಕೆ ಕಾಂಗ್ರೆಸ್ ಉತ್ತರಿಸಬೇಕು.
ಇನ್ನು “ಕಾಂಗ್ರೆಸ್ ಅಭಿವೃದ್ಧಿಯಲ್ಲಿ ರಾಜಕೀಯ ಮಾಡೋದಿಲ್ಲ” ಎಂಬ ಹೇಳಿಕೆ ಅತ್ಯಂತ ವಿಚಿತ್ರ. ವೈದ್ಯರು, ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತರ ವೇತನ ವಿಳಂಬವನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಆರೋಪ ಹೊರಿಸುವುದು ರಾಜಕೀಯವಲ್ಲದೇ ಮತ್ತೇನು...?
ಬಿಜೆಪಿ ಸ್ಪಷ್ಟವಾಗಿ ಹೇಳುವುದೇನೆಂದರೆ NHM ನೌಕರರ ವೇತನವನ್ನು ಸಮಯಕ್ಕೆ ಪಾವತಿಸುವುದು ರಾಜ್ಯ ಸರ್ಕಾರದ ನೈತಿಕ ಮತ್ತು ಆಡಳಿತಾತ್ಮಕ ಕರ್ತವ್ಯವಾಗಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಹೊರಿಸುವುದು ನಿಮ್ಮ ಅಸಮರ್ಥತೆಯನ್ನು ಮುಚ್ಚುವ ಪ್ರಯತ್ನವಷ್ಟೇ ಆಗಿದೆ. ಗೊಂದಲ ಸೃಷ್ಟಿ ಮಾಡುವವರು ಯಾರು ಎಂಬುದು ಜಿಲ್ಲೆಯ ಜನತೆಗೆ ಈಗಾಗಲೇ ತಿಳಿದಿದೆ. ಬಿಜೆಪಿ ಸದಾ ಆರೋಗ್ಯ ಸಿಬ್ಬಂದಿಯ ಗೌರವ, ಭದ್ರತೆ ಮತ್ತು ಸಮಯೋಚಿತ ವೇತನದ ಪರ ನಿಂತಿದ್ದು, ಮುಂದೆಯೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಜನಪರ ಹೋರಾಟ ಮುಂದುವರಿಸಲಿದೆ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.