ಭೈರಪ್ಪರಂತೆ ಎಲ್ಲ ಭಾಷೆಯನ್ನು ಬಲ್ಲ ಕನ್ನಡದ ಮತ್ತೊಬ್ಬ ಲೇಖಕರು ಇಲ್ಲ: ಡಾ. ಆರ್. ಗಣೇಶ್
Sunday, January 11, 2026
ಮಂಗಳೂರು: ಲಿಟ್‌ಫೆಸ್ಟ್‌ನ ಸಮಾರೋಪದಲ್ಲಿ ಭೈರಪ್ಪ ದೃಷ್ಟಿಕೋನದ ಸಾಹಿತ್ಯ ರಚನೆ ಸಾಧ್ಯತೆ ಕುರಿತು ವಿಷಯ ಮಂಡಿಸಿದ ಶತಾವಧಾನಿ ಡಾ. ಆರ್. ಗಣೇಶ್, ಡಾ.ಭೈರಪ್ಪರಂತೆ ಎಲ್ಲ ಭಾಷೆಯನ್ನು ಬಲ್ಲ ಕನ್ನಡದ ಮತ್ತೊಬ್ಬ ಲೇಖಕರು ಇಲ್ಲ. ಅವರು ರಚಿಸಿದಂಥ ಸಾಹಿತ್ಯ ರಚನೆಯಾದರೆ ಅದು ಇಡೀ ಭಾರತಕ್ಕೆ ಅನ್ವಯವಾಗುವಂತೆ ಇರಬಲ್ಲದು ಎಂದರು.
ಡಾ.ಭೈರಪ್ಪ ಅವರು ಸಾಹಿತ್ಯ ರಚನೆ ವೇಳೆ ಯಾವುದೇ ಓದುಗರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಸಾಹಿತ್ಯ ರಚನೆಗೆ ಭವ್ಯತೆ, ಉದಾತ್ತತೆ, ಅಧ್ಯಯನ ಇರಬೇಕು. ಗದ್ಯ ಬರೆಯುವವರು ಕವಿತೆ, ಕವಿತೆ ಬರೆಯುವವರು ಗದ್ಯ ಓದುವುದಿಲ್ಲ. ಹೀಗಾದಲ್ಲಿ ಮಾತ್ರ ಮುಂದಿನ ಸಾಹಿತ್ಯ ಭೈರಪ್ಪನವರ ಹಾದಿಯಲ್ಲಿ ಬೆಳಕು ಕಾಣಬಹುದು ಎಂಬ ಆಶಯವನ್ನು ಡಾ. ಆರ್. ಗಣೇಶ್ ವ್ಯಕ್ತಪಡಿಸಿದರು.
ಡಾ. ಜಿ.ಬಿ. ಹರೀಶ್ ಸಂವಾದ ನಡೆಸಿ, ಎಷ್ಟೇ ಆಧುನಿಕತೆಯ ಗಾಳಿ ಬೀಸಿದರೂ ಮತ್ತೆ ಹಳೆಯ ಸಾಹಿತ್ಯವೇ ಮೆರೆಯುತ್ತದೆ. ಲೇಖಕರಿಗೆ ಬಹುಭಾಷಾ ತಜ್ಞತೆ, ಕಲಾ ಪ್ರೀತಿ ಬರಬೇಕು. ಪ್ರಸ್ತುತ ದಿನಗಳಲ್ಲಿ ಸಾಹಿತ್ಯದಲ್ಲಿ ವಿಮರ್ಶೆಯೇ ಜಾಸ್ತಿಯಾಗಿ ಸಹೃದಯತೆ ಹೊರಟುಹೋಗಿದೆ. ಇದರಿಂದಾಗಿ ಹೊಸದಾಗಿ ಒಳ್ಳೆಯ ಸಾಹಿತ್ಯದ ಕೊರತೆ ಕಾಡತೊಡಗಿದೆ. ವಿಶ್ವಸಂಸ್ಕೃತಿಯ ಶ್ರೇಷ್ಠ ಕೃತಿಗಳನ್ನು ಅರಗಿಸಿಕೊಂಡು ಸಾಹಿತ್ಯ ರಚನೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಭಾರತ್ ಫೌಂಡೇಷನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ಮರಣಿಕೆ ನೀಡಿದರು.