ಇ-ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಮುಕ್ತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು: ಪ್ರಜೇಶ್ ಆಗ್ರಹ
ಮಂಗಳೂರು: ಇಲೆಕ್ಟ್ರಿಕ್ ಆಟೋ ರಿಕ್ಷಾಗಳು ಪರವಾನಿಗೆ ಪಡೆಯಬೇಕು ಎಂಬ ಜಿಲ್ಲಾಧಿಕಾರಿ ಅವರ ಆದೇಶವನ್ನು ಸ್ವಾಗತಿಸುತ್ತೇವೆ. ಆದರೆ, ವಲಯ ವಿಂಗಡಣೆ, ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸ್ತವ್ಯ ಇದ್ದ ಬಗ್ಗೆ ಪ್ರಮಾಣಪತ್ರ ನೀಡಬೇಕು ಎಂಬುದು ಸರಿಯಲ್ಲ. ಇ-ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಮುಕ್ತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಟೀಮ್ ಗ್ರೀನ್ ಸಿಟಿ ಆಟೋ ಚಾಲಕ ಮಾಲಕರ ಸಂಘ ಮಂಗಳೂರು ಅಧ್ಯಕ್ಷ ಪ್ರಜೇಶ್ ಆಗ್ರಹಿಸಿದರು.
ನಾವು ಈ ಹಿಂದೆ ಕಪ್ಪು ಬಣ್ಣದ ರಿಕ್ಷಾದಲ್ಲಿ ಬಾಡಿಗೆ ನಡೆಸುತ್ತಿದ್ದೆವು. ಇ ರಿಕ್ಷಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತವಾಗಿ ಬಾಡಿಗೆ ನಡೆಸಬಹುದು ಎಂಬ ಈ ಹಿಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಹಳೆಯ ರಿಕ್ಷಾ ಮಾರಾಟ ಮಾಡಿ ಬ್ಯಾಂಕ್ ಸಾಲ ಪಡೆದು ಹೊಸ ಇ-ರಿಕ್ಷಾ ಖರಿಸಿದ್ದೇವೆ. ಆದರೆ, ಇ-ರಿಕ್ಷಾಗಳು ವಲಯ ವಿಂಗಡಣೆಗೆ ಒಳಪಡಬೇಕು ಎಂದು ದಕ್ಷಿಣ ಕನ್ನಡ ಆಟೋ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಒತ್ತಾಯದಂತೆ ಈಗಿನ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆರು ತಿಂಗಳಿಗೊಮ್ಮೆ ನಿಯಮ ಬದಲಿಸಿದರೆ ನಾವು ಬ್ಯಾಂಕ್ ಸಾಲ ಪಾವತಿಸುವುದು ಸಾಧ್ಯವಿಲ್ಲ. ಆದ್ದರಿಂದ, ಇ ರಿಕ್ಷಾಗಳಿಗೂ ಜಿಲ್ಲೆಯಾದ್ಯಂತ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ನಗರದಲ್ಲಿರುವ ಬಹುತೇಕ ಇ-ರಿಕ್ಷಾ ಚಾಲಕರು 10-15 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದಾರೆ. ಅವರ ವೋಟರ್ ಐಡಿ, ಪಡಿತರ ಚೀಟಿ ಅವರ ಊರಿನಲ್ಲಿದೆ. ಹೀಗಾಗಿ ಮಂಗಳೂರಿನಲ್ಲಿ ವಾಸ್ತವ್ಯ ಇರುವ ಬಗ್ಗೆ ಪ್ರಮಾಣಪತ್ರ ಪಡೆಯುವುದು ಸಾಧ್ಯವಿಲ್ಲ. ಇ-ರಿಕ್ಷಾಗಳಿಗೆ ಪರವಾನಿಗೆ ಪಡೆಯಲು ವಿಧಿಸಿರುವ ನಿಬಂಧನೆಗಳಿಂದ ಬಡ ಇ-ರಿಕ್ಷಾ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ಇ-ರಿಕ್ಷಾ ಚಾಲಕರಿಗೆ ಏನೇ ತೊಂದರೆ ಆದರೂ ದಕ್ಷಿಣ ಕನ್ನಡ ಆಟೋ ಚಾಲಕ ಮಾಲಕರ ಸಂಘಗಳ ಒಕ್ಕೂಟ, ಜಿಲ್ಲಾಧಿಕಾರಿ, ಆರ್‌ಟಿಒ ಹೊಣೆ ಎಂದು ಅವರು ಹೇಳಿದರು.
ಇ-ರಿಕ್ಷಾಗಳಿಗೆ ಒಬ್ಬರಿಗೆ ಒಂದೇ ಪರವಾನಿಗೆ ಎಂಬ ನಿಬಂಧನೆಯನ್ನು ಸಿಎನ್‌ಜಿ-ಎಲ್‌ಪಿಜಿ ರಿಕ್ಷಾಗಳಿಗೂ ಅನ್ವಯಿಸಲಿ. ನಗರದಲ್ಲಿ ಅನೇಕ ಮಂದಿ ಸಿಎನ್‌ಜಿ-ಎಲ್‌ಪಿಜಿ ರಿಕ್ಷಾ ಚಾಲಕ-ಮಾಲಕರು 10-15 ರಿಕ್ಷಾಗಳನ್ನು ಹೊಂದಿದ್ದಾರೆ. ನಮಗೆ ವಿಽಸಿರುವ ನಿಬಂಧನೆ ಸಿಎನ್‌ಜಿ-ಎಲ್‌ಪಿಜಿ ರಿಕ್ಷಾಗಳಿಗೂ ಅನ್ವಯಯವಾಗಲಿ ಎಂದರು.
ಸಂಘದ ಉಪಾಧ್ಯಕ್ಷ ಮೋಹನ್ ದಾಸ್, ಸದಸ್ಯರಾದ ರೋಷನ್, ಸುದಾಸ್ ಕಾವೂರು, ಜೀವನ್ ಕೊಂಚಾಡಿ ಉಪಸ್ಥಿತರಿದ್ದರು.
ನಗರದಲ್ಲಿ ರಿಕ್ಷಾ ಪರ್ಮಿಟ್ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಈ ದಂಧೆಯಲ್ಲಿ ಆರ್‌ಟಿಒ ಕಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಈ ಕುರಿತು ಸದ್ಯದಲ್ಲೇ ದಾಖಲೆಯನ್ನೂ ಬಿಡುಗಡೆ ಮಾಡುತ್ತೇವೆ. ರಿಕ್ಷಾ ಪರವಾನಿಗೆಗೆ 600 ರೂ. ಇದೆ. ಆದರೆ, ಕಾಳಸಂತೆಯಲ್ಲಿ 2.5 ಲಕ್ಷ ರೂ.ನಿಂದ 3 ಲಕ್ಷ ರೂ.ವರೆಗೆ ಪಡೆಯಲಾಗುತ್ತಿದೆ ಎಂದು ಪ್ರಜೇಶ್ ಆರೋಪಿಸಿದರು.
ನಗರದ ರಿಕ್ಷಾ ಪ್ರಯಾಣಿಕರು ಇ-ರಿಕ್ಷಾಗಳನ್ನೇ ಬಯಸುತ್ತಿದ್ದಾರೆ. ಸಾಂಪ್ರದಾಯಿಕ ಎಲ್‌ಪಿಜಿ-ಸಿಎನ್‌ಜಿ ರಿಕ್ಷಾ ಚಾಲಕರು ನಗರದಲ್ಲಿ ಹಗಲಿನ ವೇಳೆಯೇ ಒಂದೂವರೆ ಪಟ್ಟು ದರ ಪಡೆಯುತ್ತಿದ್ದರು. ಕರೆದಲ್ಲಿಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ಹೆಚ್ಚುವರಿ ದರ ಕೇಳುತ್ತಿದ್ದರು. ಇ ರಿಕ್ಷಾಗಳು ರಸ್ತೆಗಿಳಿದ ಮೇಲೆ ಈ ಸಮಸ್ಯೆಗಳು ಬಹುತೇಕ ಬಗೆಹರಿದಿವೆ ಎಂದು ಪ್ರಜೇಶ್ ಹೇಳಿದರು.