ನಾಳೆಯಿಂದ ಮಂಗಳೂರಿನಲ್ಲಿ ಆಯುಷ್ ಹಬ್ಬ
ಮಂಗಳೂರು: ಆರೋಗ್ಯಯುತ ಸಮಾಜಕ್ಕಾಗಿ ಜನಜಾಗೃತಿ ಹಾಗೂ ಸಂಭ್ರಮಾಚರಣೆಯ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ ‘ಆಯುಷ್ ಹಬ್ಬ’ ಜ.31 ಹಾಗೂ ಫೆ.1ರಂದು ಮಂಗಳೂರಿನ ಡಾ.ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ ಎಂದು ಆಯುಷ್ ಹಬ್ಬ ಸಮಿತಿ ಗೌರವ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.31ರಂದು ಪೂರ್ವಾಹ್ನ 10.30ಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಯುಷ್ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಸಂಜೆಯವರೆಗೆ ವೈಜ್ಞಾನಿಕ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದರು.
ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿ ವೈದ್ಯ ಪದ್ಧತಿಗಳ ಬೃಹತ್ ಸೇವೆಗಳು ಒಂದೇ ವೇದಿಕೆಯಲ್ಲಿ ಒದಗಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಭಾರತೀಯ ವೈದ್ಯ ಪದ್ಧತಿಗಳಲ್ಲಿ ಲಭ್ಯ ಇರುವ ಚಿಕಿತ್ಸಾ ಸೌಲಭ್ಯಗಳು, ಅವುಗಳ ಪ್ರಯೋಜನಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಪಡೆಯಲು ಇದು ಅಪೂರ್ವ ಅವಕಾಶ ಎಂದವರು ತಿಳಿಸಿದರು.
ಆಯುಷ್ ಹಬ್ಬಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶ ಇರಲಿದೆ. ಮಕ್ಕಳ ಹಬ್ಬ, ವಿದ್ಯಾರ್ಥಿಗಳಿಗೆ ಆಯುಷ್ ವೃತ್ತಿ ಮಾರ್ಗದರ್ಶನ, ಉಚಿತ ವೈದ್ಯಕೀಯ ತಪಾಸಣೆ, ಸಲಹೆ, ಪ್ರಕೃತಿ, ನಾಡಿ ಪರೀಕ್ಷೆ, ಆಯುಷ್ ಆಹಾರ ಸಂತೆ, ಸಾವಯವ ಸಂತೆ, ಯೋಗ ಧ್ಯಾನ, ಒತ್ತಡ ನಿವಾರಣಾ ಶಿಬಿರ ನಡೆಯಲಿದೆ ಎಂದರು.
ಫೆ.1ರಂದು ಬೆಳಗ್ಗೆ 10.30ಕ್ಕೆ ಆಯುಷ್ ವೈದ್ಯ ಪದ್ದತಿಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಆಯುಷ್ ರತ್ನ ಪುರಸ್ಕಾರ, ಡಾ.ಎಂ.ಮೋಹನ್ ಆಳ್ವ ಅವರಿಗೆ ಆಯುಷ್ ವಿಭೂಷಣ ಪುರಸ್ಕಾರ ಸಹಿತ ಹಲವು ಗಣ್ಯರಿಗೆ ಆಯುಷ್ ಭೂಷಣ ಪ್ರಶಸ್ತಿ, ಆಯುಷ್ ಶ್ರೀ ಪ್ರಶಸ್ತಿ ಹಾಗೂ ಆಯುಷ್ ಯುವಶ್ರೀ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಬಳಿಕ ಸಂಜೆಯವರೆಗೆ ಸಂಜೆಯವರೆಗೆ ವೈಜ್ಞಾನಿಕ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಆಯುಷ್ ಹಬ್ಬ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ತಿಳಿಸಿದರು.
ಆಯುಷ್ ಹಬ್ಬ ಸಮಿತಿ ಅಧ್ಯಕ್ಷ ಡಾ.ಕೇಶವ ಪಿ.ಕೆ., ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಪ್ರಮುಖರಾದ ಡಾ.ಪ್ರವೀಣ್ ರೈಉಪಸ್ಥಿತರಿದ್ದರು