"ರಾಜ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಸುಭಿಕ್ಷವಾಗಿದೆ" ಎಂದು ರಾಜ್ಯ ಸರ್ಕಾರವು ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸುವ ಪ್ರಯತ್ನ ಮಾಡಿರುವುದು ಪ್ರಜಾಪ್ರಭುತ್ವದ ದುರಂತ: ಶಾಸಕ ಕಾಮತ್
ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ವೇಳೆ ಮಾತನಾಡಿದ ಶಾಸಕರು, ಕಳೆದ ಎರಡೂವರೆ ವರ್ಷದಿಂದ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ನಗರ ವ್ಯಾಪ್ತಿಯಲ್ಲಿ ಜೈಲ್ ಜಾಮರ್ ಹಾಗೂ ಇ-ಖಾತಾ ಸಮಸ್ಯೆಯಿಂದಾಗಿ ಜನರು ಸರ್ಕಾರಕ್ಕೆ ಛೀಮಾರಿಯಾಗುತ್ತಿದ್ದಾರೆ. ಫ್ರೀ ಅಕ್ಕಿ ಕೊಡುತ್ತೇವೆ ಹೇಳಿ ಈಗ ರೇಷನ್ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಿಸಿದ್ದಾರೆ.
ನನ್ನ ಮತ ಕ್ಷೇತ್ರದಲ್ಲಿಯೇ ಅರ್ಹರ ಬಿಪಿಎಲ್ ಕಾರ್ಡ್ ಕೂಡಾ ರದ್ದುಗೊಳಿಸಲಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮೀನುಗಾರರ ರಕ್ಷಣೆಗೆ ಅಗತ್ಯವಿರುವ ಸೀ ಆಂಬುಲೆನ್ಸ್ ಕೊಟ್ಟಿಲ್ಲ, ಡ್ರೆಜ್ಜಿಂಗ್ ಮಿಷನ್ ಕೂಡಾ ಇಲ್ಲ, ಮೀನುಗಾರಿಕಾ ಜಟ್ಟಿ, ಕ್ರೂಸ್, ಫ್ಲೋಟಿಂಗ್ ಜಟ್ಟಿ ಯಾವುದೂ ಸಾಕಾರಗೊಂಡಿಲ್ಲ. ಬಂದರುಗಳ ಲ್ಯಾಂಡ್ ರೆಂಟ್ ದರಗಳ ಹೆಚ್ಚಳದಿಂದಾಗಿ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ ಎಂದರು.
ಮಂಗಳೂರು ಆಯುಷ್ ನಲ್ಲಿ ಔಷಧ ಅಕ್ರಮ, ಅಬಕಾರಿ ಹಗರಣ, ವಾಲ್ಮೀಕಿ ನಿಗಮ, ಮೂಡಾ ಹಗರಣ, ಕಾರ್ಮಿಕ ಇಲಾಖೆಯ ಕಿಟ್ ಹಗರಣ, ಕಸ ಗುಡಿಸುವ ಯಂತ್ರಗಳ ಹಗರಣ, ಎಲ್ಲಾ ಇಲಾಖೆಗಳ ವರ್ಗಾವಣೆಯಲ್ಲಿ ಲಂಚಾವತಾರ, ಎಸ್ ಸಿ/ಎಸ್ ಟಿ, ವರ್ಗದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಲ್ಲದೇ, ನಾರಾಯಣ ಗುರು, ಬಂಟ ನಿಗಮಗಳಿಗೆ ಅನುದಾನ ನೀಡದೇ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡಿದೆ. ಇಂತಹ ಸರ್ಕಾರ ಯಾವ ಮುಖ ಇಟ್ಟುಕೊಂಡು ನಮ್ಮದು ಉತ್ತಮ ಆಡಳಿತ ಎಂದು ರಾಜ್ಯಪಾಲರಿಂದ ಹೇಳಿಸುತ್ತದೆ? ಎಂದು ಪ್ರಶ್ನಿಸಿದರು.