ಹಣದ ಬೇಡಿಕೆ, ಜೀವ ಬೆದರಿಕೆ: ಪ್ರಕರಣ ದಾಖಲು

ಹಣದ ಬೇಡಿಕೆ, ಜೀವ ಬೆದರಿಕೆ: ಪ್ರಕರಣ ದಾಖಲು

ಮಂಗಳೂರು: ಕೃಷಿಕರೊಬ್ಬರಿಂದ ಸಂಘಪರಿವಾರದ ಕಾರ್ಯಕರ್ತರೆನ್ನಲಾದವರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಅಂಗಾರಗುಡ್ಡೆಯಲ್ಲಿ ಬುಧವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಣ ಸುಲಿಗೆ ಮಾಡುವ ಉದ್ದೇಶದಿಂದ ಕೈಯಿಂದ ಹಲ್ಲೆಗೈದು, ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶ್ಯಾಮಸುಂದರ್ ಶೆಟ್ಟಿ, ಅಕ್ಷಯ ಪೂಜಾರಿ, ಸುವಿನ್ ಎಂದು ಪೊಲೀಸರು ತಿಳಿಸಿದ್ದಾರೆ.

ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಅವರು ತಮ್ಮ ಜಾನುವಾರುಗಳನ್ನು ನೆರೆ ಮನೆಯ ಜಗ್ಗು ಶೆಟ್ಟಿರವರಿಗೆ ಸಂಬಂಧಿಸಿದ ಕೊಟ್ಟಿಗೆಯಲ್ಲಿ ಸಾಕುತ್ತಿದ್ದರು. ಇದರಲ್ಲಿ ಕೆಲವು ಕಂಬಳದ ಕೋಣಗಳಿದ್ದು, ಮುಲ್ಕಿ ಪಡುಪಣಂಬೂರು ಅರಸು ಕಂಬಳದಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದವು.

ಗುರುವಾರ 11 ಗಂಟೆಗೆ ಕಾರಿನಲ್ಲಿ ಬಂದ ಆರೋಪಿಗಳು ಕೊಟ್ಟಿಗೆಯಲ್ಲಿರುವ ಜಾನುವಾರುಗಳ ಪೋಟೋ ಮತ್ತು ವಿಡಿಯೋ ತೆಗೆದು ಅಲ್ಲಿಂದ ಹೋಗಿದ್ದರು. ಬಳಿಕ ಸಂಜೆ ಸಹಾಬುದ್ದೀನ್ ಹಾಗೂ ಅವರ ತಂದೆ ಸಂಶುದ್ದೀನ್ ಅವರು ಕಂಬಳದ ಕೋಣಗಳಿಗೆ ಎಣ್ಣೆಯಿಂದ ಮಾಲೀಶ್ ಮಾಡುತ್ತಿದ್ದ ಸಮಯ ಶ್ಯಾಮ್ ಸುಂದರ್ ಶೆಟ್ಟಿ ಮತ್ತು ಅಕ್ಷಯ ಪೂಜಾರಿ ಹಾಗೂ ಸುವೀನ್ ಎಂಬವರು ಕಾರಿನಲ್ಲಿ ಬಂದು ಕಬ್ಬಿಣದ ರಾಡ್ ಹಿಡಿದುಕೊಂಡು ಜಾನುವಾರು ಸಾಕುವ ಕೊಟ್ಟಿಗೆಯ ಬಳಿಯ ಮನೆಯ ಎದುರು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಂಬಳದ ಕೋಣಗಳ ಬಗ್ಗೆ ವಿಚಾರಿಸಿ ನಂತರ 50 ಸಾವಿರ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅದಕ್ಕೆ ಸಹಾಬುದ್ದೀನ್ ಅವರು ಯಾಕೆ ನಿಮಗೆ ಹಣ ಕೊಡಬೇಕು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಬೈಯಲು ಪ್ರಾರಂಭಿಸಿದಾಗ ಜಗಳವಾಗಿದ್ದು, ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ ಸಂತ್ರಸ್ತರ ತಲೆಗೆ ಕೈಯಿಂದ ಹೊಡೆದು ಕೋಣಗಳನ್ನು ಕಡಿಯಲು ತಂದಿದ್ದೀಯಾ ಎಂದು ಅವಾಚ್ಯವಾಗಿ ಬೈದಿದ್ದಾನೆ. ಈ ವೇಳೆ ಮತ್ತೋರ್ವ ಆರೋಪಿ ಅಕ್ಷಯ ಪೂಜಾರಿ ಕೈಯಿಂದ ಎದೆಗೆ ಗುದ್ದಿ ಹಣಕ್ಕಾಗಿ ಬೇಡಿಕೆ ಇಟ್ಟರು. ಇದರಿಂದ ವಿಚಲಿತರಾದ ಸಹಾಬುದ್ದೀನ್ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಆರಂಭಿಸಿದಾಗ ಆರೋಪಿ ಸುವೀನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕಬ್ಬಿಣದ ರಾಡ್ ನಿಂದ ಸಹಾಬುದ್ದೀನ್ ಅವರ ತಲೆಗೆ ಬೀಸಿದ್ದು, ಅವರು ತಪ್ಪಿಸಿಕೊಂಡಿದ್ದಾರೆ. ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ ಶಂಸು ಸಾಹೇಬ್ ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಂದೆಯನ್ನು ರಕ್ಷಿಸುವ ಸಲುವಾಗಿ ಸಹಾಬುದ್ದೀನ್ ಅವರು ಆರೋಪಿಗಳನ್ನು ತಳ್ಳಿದ್ದಾರೆ. ಈ ವೇಳೆ ಸ್ಥಳೀಯರು ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article