ಸಮಸ್ಯೆಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ: ಸಾಹಿತಿ ಡಾ. ಕೆ. ಶರೀಫಾ
ಅವರು ಜ.15 ರಂದು ನಗರದ ಪುರಭವನದಲ್ಲಿ ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ-ಕೊಂದವರು ಯಾರು-ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.
ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆರೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ ಎಂದ ಅವರು ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನಾ ಸಮಯದಲ್ಲಿಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಸಂಪಾದಕಿ ಶಹನಾಜ್ ಎಂ. 25 ವರ್ಷಗಳ ಹಾದಿಯನ್ನು ವಿವರಿಸಿ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ. ಅನುಪಮ ಮಾಸಿಕ ಡಿಜಿಟಲ್ ರೂಪದಲ್ಲಿಯೂ ಬರಲಿದೆ ಎಂದರು.
ಬೆಥನಿ ಸಂತ ತೆರೇಸಾ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್ ಮಾತನಾಡಿ, ಅನುಪಮ ಪತ್ರಿಕೆ ಒಂದು ನಂಬಿಕೆಯ ಅಡಿಗಲ್ಲಾಗಿದೆ. ಮೌಲ್ಯಗಳಿಗೆ ಬೆಲೆ ನೀಡಿ, ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುತ್ತಿದೆ. ಹಲವಾರು ಮಹಿಳೆಯರ ಕನಸುಗಳಿಗೆ ಆಧಾರವಾಗಿ, ನೋವು ನಲಿವುಗಳನ್ನು ಹಂಚುತ್ತಿದೆ. ಹೀಗಾಗಿ ಈ ಪತ್ರಿಕೆ ಮಹಿಳೆಯರ ಜೊತೆಗಾತಿಯಾಗಿದೆ ಎಂದರು.
ಆಪ್ತ ಸಮಾಲೋಚಕಿ ಡಾ. ರುಕ್ಸಾನ ಮಾತನಾಡಿ, ವಿದ್ಯಾಭ್ಯಾಸ ಮಾಡಿದ ಹುಡುಗಿಯರನ್ನು ತಮಾಷೆ ಮಾಡುವ ಕಾಲದಲ್ಲಿ ಒಂದು ಯಶಸ್ವೀ ಪತ್ರಿಕೆ ನಡೆಸುತ್ತಿರುವುದು ದೊಡ್ಡಸಾಧನೆ ಎಂದರು.
ಮುಂಬೈನ ಹಿರಿಯ ವಕೀಲೆ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ತನ್ನ ಮನದಾಳದ ಮಾತು ಹಂಚಿಕೊಂಡರು. ಹಿರಿಯ ಲೇಖಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ. ಅನುಪಮದ ಹಿರಿಯ ಓದುಗ ಬಳಗದ ಆಯೇಷಾ ಇಬ್ರಾಹಿಂ ಶಫಿರವರನ್ನು ಸನ್ಮಾನಿಸಲಾಯಿತು.
ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಬಾಲಕೃಷ್ಣ, ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡಿ, ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಕೇಂದ್ರ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅನುಪಮ ಓದುಗರಾದ ಶಿಹನಾ ಬಿ.ಮ್., ಶಮೀಮಾ ಕುತ್ತಾರ್ ಹಾಗೂ ಶ್ರೀಮತಿ ಸುಖಾಲಕ್ಷಿ ತಮ್ಮ ಅನಿಸಿಕೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.