ಉಪನಿಷತ್ ನಲ್ಲಿಯೇ ಕಾಶಿ ಉಲ್ಲೇಖವಿದೆ, ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ: ಡಾ. ಮೀನಾಕ್ಷಿ ಜೈನ್
8ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಸ್ವೀಕರಿಸಿದ ಅವರು ಬಳಿಕ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನದ ಜಾಗ ವಿವಾದಕ್ಕೀಡಾಗಿರುವುದರ ಕುರಿತು ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಶಿಯ ಇತಿಹಾಸವನ್ನು 12ನೇ ಶತಮಾನದಿಂದ ಉಲ್ಲೇಖಿಸಲಾಗುತ್ತದೆ. ಅದು ತಪ್ಪು. ಉಪನಿಷತ್ ಕಾಲದಿಂದಲೂ ಕಾಶಿಗೆ ಅಸ್ತಿತ್ವವಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿಯ ಇತಿಹಾಸವನ್ನು ದೇವಸ್ಥಾನದ ಗೋಡೆಗಳ ಮೇಲೆಯೇ ಬರೆಯಲಾಗಿದೆ. ಆದರೂ 1936ರಲ್ಲಿ ವ್ಯಕ್ತಿಯೊಬ್ಬರು ಅದು ವಕ್ಫ್ ಗೆ ಸೇರಿದ ಜಾಗವೆಂದು ದಾವೆ ಹೂಡಿದರು. ಬ್ರಿಟಿಷರ ಆಡಳಿತದಲ್ಲೇ ಸಂಪೂರ್ಣವಾಗಿ ತನಿಖೆ ನಡೆಸಲಾಯಿತು. ಅಲ್ಲಿ 35 ನಿವಾಸಿಗಳನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಾಯಿತು. ಸುಮಾರು ನಾಲ್ಕು ಸಾವಿರ ಪುಟಗಳಷ್ಟು ವರದಿಯನ್ನು ಸಲ್ಲಿಸಲಾಗಿದೆ’ ಎಂದು ಹೇಳಿದರು.
ನಾಗರೀಕತೆಯ ಜೊತೆಗೆ ಮರುಸಂಪರ್ಕ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ನಾಗರೀಕತೆಗಳು ಕಾಲಾನುಕ್ರಮದಲ್ಲಿ ನಶಿಸಿ ಹೋಗಿವೆ. ಆದರೆ, ನಮ್ಮ ನಾಗರೀಕತೆ ಹಲವು ದಾಳಿಗಳ ನಂತರವೂ ಈಗಲೂ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ, ಜನ ಸಾಮಾನ್ಯರು ಮತ್ತು ಅವರ ನಂಬಿಕೆ’ ಎಂದು ಹೇಳಿದರು.
‘ನಮ್ಮ ನಾಗರೀಕತೆಯ ಮೇಲೆ ಏನೇ ದಾಳಿಗಳು ನಡೆದರೂ, ನಾವು ಶರಣಾಗತರಾಗಲಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ನಂಬಿಕೆಗಳು ಮತ್ತು ಆಚರಣೆಗಳು. ನಾವು ತಾಯಿಯನ್ನು ಪೂಜಿಸುತ್ತಾ ಬಂದಿದ್ದೇವೆ. ಮಧ್ಯ ಪ್ರದೇಶದಲ್ಲಿ ಸಿಕ್ಕ ಸುಮಾರು 11 ಸಾವಿರ ವರ್ಷಗಳ ಹಿಂದಿನ ಶಾಸನದಲ್ಲೂ ಇದರ ಉಲ್ಲೇಖವಿದೆ. ಈಗಲೂ ಅದು ಮುಂದುವರೆದಿದೆ. ನಾವು ನಮ್ಮ ನಂಬಿಕೆಯನ್ನು ಬಿಟ್ಟಿಲ್ಲ. ಆ ನಂಬಿಕೆಯನ್ನು ಪಾಲಿಸಿಕೊಂಡು ಬಂದವರು ಜನ ಸಾಮಾನ್ಯರು’ ಎಂದು ಹೇಳಿದರು.
ಎಲ್ಲಾ ಧರ್ಮದವರು ಸೌಹಾರ್ದಯುತವಾಗಿ ಬಾಳಿದ ದೇಶ ನಮ್ಮದು, ಈ ಕುರಿತು ವಿವರಣೆ ನೀಡಿದ ಅವರು, ‘ಹಿಂದಿನ ಕಾಲದಲ್ಲಿ ರಾಜರಿಗಿಂತ ಜನ ಸಾಮಾನ್ಯರು ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದರು. ನಮ್ಮ ನಾಗರಿಕತೆಯನ್ನು ಕಟ್ಟಿದ್ದು ಬರೀ ರಾಜರಲ್ಲ, ಜನಸಾಮಾನ್ಯರ ಪಾಲು ಬಹಳ ದೊಡ್ಡದಿದೆ. ಸಂಚಿಯಲ್ಲಿ ಕೆಲವು ವರ್ಷಗಳ ಹಿಂದೆ 601 ಶಾಸನಗಳು ಸಿಕ್ಕಿವೆ. ಅಲ್ಲಿರುವ ಸ್ತಂಭಗಳ ಪೈಕಿ, ಮೂರನ್ನು ಮಾತ್ರ ರಾಜರು ದಾನ ಮಾಡಿದ್ದಾರೆ. ಮಿಕ್ಕಂತೆ ಎಲ್ಲವನ್ನೂ ಜನ ಸಾಮಾನ್ಯರು ದಾನ ಮಾಡಿದ್ದಾರೆ. ಮರಗೆಲಸ ಮಾಡುವವರು, ಬಂಡಿ ಎಳೆಯುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಿದ್ದಾರೆ. ಅದನ್ನು ಶಾಸನಗಳಲ್ಲೇ ನಮೂದಿಸಲಾಗಿದೆ. ಬರೀ ಗಂಡಸರಷ್ಟೇ ಅಲ್ಲ, ಮಹಿಳೆಯರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ನಮ್ಮಲ್ಲಿ ಯಾವಾಗಲೂ ಬೇರೆಬೇರೆ ವರ್ಗಗಳ ಜನರ ನಡುವೆ ಕಿತ್ತಾಟಗಳು ನಡೆಯುತ್ತಿದ್ದವು, ನಾವು ಯಾವಾಗಲೂ ಹೊಡೆದಾಡಿಕೊಳ್ಳುತ್ತಿದ್ದೆವು ಎಂಬುದನ್ನು ಪಠ್ಯಗಳಲ್ಲಿ ಹೇಳಿಕೊಡಲಾಗಿದೆ. ತಲೆತಲಾಂತರಗಳಿಂದ ಹಿಂದೂಗಳು, ಜೈನರು ಮತ್ತು ಬೌದ್ಧರ ನಡುವೆ ಆಂತರಿಕ ಕಚ್ಚಾಟಗಳು ನಡೆಯುತ್ತಿದ್ದವು ಎಂದು ಹೇಳಿಕೊಡಲಾಗಿದೆ. ನಮ್ಮನ್ನು ಒಡೆದು ಆಳಲು ಬ್ರಿಟಿಷರು ಮಾಡಿದ ಹುನ್ನಾರ ಇದು. ಆದರೆ ಅದು ಸುಳ್ಳು. ಎಲ್ಲಾ ಧರ್ಮದವರು ಸೌಹಾರ್ದಯುತರಾಗಿ ಬಾಳಿದ ದೇಶ ನಮ್ಮದು. ಭಾರತದ ಇತಿಹಾಸವನ್ನು ಭಾರತೀಯರ ಕಣ್ಣುಗಳಲ್ಲಿ ನೋಡಬೇಕೇ ಹೊರತು, ವಿದೇಶಿಗರ ಕಣ್ಣುಗಳಿಂದ ಅಲ್ಲ’ ಎಂದರು.
ಡಾ. ಮೀನಾಕ್ಷಿ ಜೈನ್ ಅವರ ಸಂವಾದವನ್ನು ಅಗ್ರಿಲೀಫ್ ಸಂಸ್ಥೆಯ ಚೀಫ್ ಆಫ್ ಸ್ಟಾಫ್ ಪೃಥ್ವಿ ಕಾರಿಂಜೆ ನಡೆಸಿಕೊಟ್ಟರು. ಅದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಡಾ.ಮೀನಾಕ್ಷಿ ಜೈನ್ ಉತ್ಸಾಹದಿಂದ ಭಾಗವಹಿಸಿ ಸರಸ್ವತಿ ರಥವನ್ನು ಎಳೆದರು. ನಂತರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶತಾವಧಾನಿ ಆರ್. ಗಣೇಶ್, ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಎಸ್. ರವಿ, ಭಾರತ್ ಫೌಂಡೇಷನ್ ಟ್ರಸ್ಟಿಗಳಾದ ಸುನೀಲ್ ಕುಲಕರ್ಣಿ, ಸುಜಿತ್ ಪ್ರತಾಪ್, ದುರ್ಗಾ ರಾಮದಾಸ್ ಕಟೀಲ್ ಮತ್ತು ಶ್ರೀರಾಜ್ ಗುಡಿ ಇದ್ದರು.
