ಶಿಕ್ಷಣ ಸಂಸ್ಥೆಗಳ ಪರಿಸರದ ಅಂಗಡಿ ತಪಾಸಣೆ ತೀವ್ರಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಶಿಕ್ಷಣ ಸಂಸ್ಥೆಗಳ ಪರಿಸರದ ಅಂಗಡಿ ತಪಾಸಣೆ ತೀವ್ರಗೊಳಿಸಲು ಜಿಲ್ಲಾಧಿಕಾರಿ ಸೂಚನೆ


ಮಂಗಳೂರು: ಶಾಲಾ ಕಾಲೇಜುಗಳ ಆಸುಪಾಸಿನಲ್ಲಿ ಕಾರ್ಯಾಚರಿಸುವ ಅಂಗಡಿಗಳಲ್ಲಿ ಮಾದಕ ವಸ್ತು ಮತ್ತು ಧೂಮಪಾನ ಮಾರಾಟದ ಬಗ್ಗೆ ನಿರಂತರ ತಪಾಸಣೆ ನಡೆಸುವಂತೆ  ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ತಿಳಿಸಿದ್ದಾರೆ.

ಮಂಗಳವಾರ  ಪುರಭವನದಲ್ಲಿ ನಡೆದ  ನಾರ್ಕೋ ಕೋ ಆರ್ಡಿನೇಶನ್ ಸೆಂಟರ್‌ನ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಗ್ಗಿಂದಾಗೆ ನಡೆಸಬೇಕು. ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಿಂದಾಗಿ ಮಾದಕ ವಸ್ತುಗಳನ್ನು ಸೇವಿಸುವ ಬಗ್ಗೆ ವರದಿ ಬಂದಿದೆ. ಈ ನಿಟ್ಟಿನಲ್ಲಿ ಶಾಲೆ, ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ  ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದರು.  

ಪದವಿಪೂರ್ವ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ನಿರ್ಲಕ್ಷ್ಯ ವಹಿಸಿದ ಬಗ್ಗೆ   ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಡ್ರಗ್ಸ್ ಪರೀಕ್ಷೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆಗೆ ಹೆಚ್ಚಿನ ಕಿಟ್ಗಳನ್ನು  ಒದಗಿಸಲಾಗುವುದು ಎಂದು ಅವರು ತಿಳಿಸಿದರು. 

ಪೊಲೀಸ್ ಅಧೀಕ್ಷಕ  ಡಾ. ಅರುಣ್ ಕೆ ಮಾತನಾಡಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕರಲ್ಲಿ  ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಆಗ್ಗಿಂದಾಗೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧವೇ  ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಮಂಗಳೂರು ನಗರದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 62 ಡ್ರಗ್ಸ್ ಸೇವಿಸಿದವರನ್ನು  ಹಾಗೂ 21 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ  ಎಂದು ಪೊಲೀಸ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು  ಹೋಂ ಸ್ಟೇ ಮತ್ತು ಲಾಡ್ಜ್‌ಗಳಲ್ಲಿ ಆಗ್ಗಿಂದಾಗೆ ತಪಾಸಣೆ ನಡೆಸಬೇಕು. ಕರಾವಳಿ ಭದ್ರತಾ ಪೊಲೀಸರು ಬೋಟ್ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಪಾರ್ಸೆಲ್ಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು  ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮೆಡಿಕಲ್‌ಗಳಲ್ಲಿ ಔಷಧದ ಮಾರಾಟದ ಬಗ್ಗೆ ಸೂಕ್ತ ದಾಖಲೆಯನ್ನು ನಿರ್ವಹಿಸದ 4 ಮೆಡಿಕಲ್ಗಳಿಗೆ ಶೋಕಾಸ್ ನೋಟಿಸ್  ನೀಡಲಾಗಿದೆ ಎಂದು ಔಷದ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಉಪ ಪೊಲೀಸ್ ಆಯುಕ್ತ ಮಿಥುನ್  ಹೆಚ್.ಎನ್, ಎಎಸ್ಪಿ ಅನಿಲ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ  ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article