ರಾಜ್ಯಾದ್ಯಂತ ಕಂಬಳ ನಡೆಸಲು ಹಸಿರು ನಿಶಾನೆ: ಬೆಳಪು ದೇವಿಪ್ರಸಾದ್ ಶೆಟ್ಟಿ

ರಾಜ್ಯಾದ್ಯಂತ ಕಂಬಳ ನಡೆಸಲು ಹಸಿರು ನಿಶಾನೆ: ಬೆಳಪು ದೇವಿಪ್ರಸಾದ್ ಶೆಟ್ಟಿ


ಮಂಗಳೂರು: ರಾಜ್ಯ ಸರಕಾರವು ಕಂಬಳಕ್ಕೆ ಕ್ರೀಡಾ ಸ್ಥಾನಮಾನ ನೀಡಿದೆ. ಹೈಕೋರ್ಟ್ ಕೂಡಾ ರಾಜ್ಯಾದ್ಯಂತ ಕಂಬಳ ನಡೆಸಲು ಹಸಿರು ನಿಶಾನೆ ನೀಡಿದೆ. ಹಾಗಾಗಿ ಮುಂದಿನ ಋತುವಿನಿಂದ ರಾಜ್ಯಾದ್ಯಂತ ಕಂಬಳ ಆಯೋಜಿಸಲು ಅವಕಾಶ ಸಿಗಲಿದೆ ಎಂದು ರಾಜ್ಯ ಕಂಬಳ ಅ ಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಕಂಬಳ ಅಸೋಸಿಯೇಶನ್ ಮತ್ತು ದ.ಕ.ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಕಂಬಳ ಸಮಿತಿ, ಕಂಬಳ ವ್ಯವಸ್ಥಾಪಕರು, ಕಂಬಳ ಸಂಘಟಕರು, ಕೋಣಗಳ ಯಜಮಾನರುಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 

ಈ ಹಿಂದೆ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದಾಗ ಮೈಸೂರು, ಶಿವಮೊಗ್ಗದಲ್ಲಿ ಕಂಬಳ ನಡೆಸಬೇಕು ಎಂಬ ಬೇಡಿಕೆಯಿತ್ತು. ಇದೀಗ ಎಲ್ಲ ಅಡೆತಡೆಗಳು ದೂರವಾಗಿದೆ. ರಾಜ್ಯಾದ್ಯಂತ ಕಂಬಳ ನಡೆಸಬಹುದಾಗಿದೆ. ಪಿಲಿಕುಳ ಕಂಬಳದ ಬಗ್ಗೆ ಶೀಘ್ರದಲ್ಲೇ ಹೈಕೋರ್ಟ್ ತೀರ್ಪು ನೀಡಲಿದೆ ಎಂದ ಅವರು, ಕಂಬಳ ಕ್ರೀಡೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಬಂದಾಗ ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆಯಲ್ಲಿ ಸರಿ ಮಾಡಿಕೊಳ್ಳುತ್ತೇವೆ. ಕಂಬಳದ ಇತಿಹಾಸದಲ್ಲಿ ಇದೇನು ಹೊಸತಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನೇ ವೈಭವೀಕರಿಸಲಾಗುತ್ತಿದೆ. ಮಂಗಳೂರು ಕಂಬಳದಲ್ಲಿ ಇಂತಹದೇ ಘಟನೆ ನಡೆದಿದ್ದು, ಅದನ್ನು ನಾವು ಮಾತುಕತೆ ಮೂಲಕ ಬಗೆಹರಿಸಿದ್ದೇವೆ ಎಂದರು. 

ಮುಂದಿನ ದಿನಗಳಲ್ಲಿ ಕಂಬಳದಲ್ಲಿ ಶಿಸ್ತುಪಾಲನೆ ಮಾಡಲು ಸೂಚನೆ ನೀಡಲಾಗಿದೆ, ವೈಯಕ್ತಿಕ ನಿಂದನೆ, ಟೀಕೆ, ಘೋಷಣೆಗಳಿಗೆ ಮುಂದಿನ ಕಂಬಳಗಳಲ್ಲಿ ಅವಕಾಶವಿಲ್ಲ. ಪಶು ಸಂಗೋಪನೆ ಅಧಿಕಾರಿಗಳು ಕಂಬಳದ ಬಗ್ಗೆ ವಹಿಸಲಿದ್ದಾರೆ. ಈ ಬಾರಿ 25 ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡುವುದಾಗಿ ಸರಕಾರ ಭರವಸೆ ನೀಡಿದೆ. ಶೀಘ್ರದಲ್ಲೇ ಕಂಬಳ ಓಟಗಾರರ ಸಹಿತ ಎಲ್ಲರಿಗೂ ಕಾರ್ಮಿಕ ಕಾರ್ಡ್ ನೀಡಲಾಗುವುದು. ಕಂಬಳ ಅಸೋಸಿಯೇಶನ್‌ನಿಂದ ಮುಂದಿನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕ್ರೀಡಾ ರತ್ನ ಪ್ರಶಸ್ತಿ ಶಿಫಾರಸು ಮಾಡಲಾಗುವುದು ಎಂದರು. 

ಕಂಬಳ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾರಕೂರು ಶಾಂತರಾಮ ಶೆಟ್ಟಿ, ಶ್ರೀಕಾಂತ್ ಭಟ್ ನಂದಳಿಕೆ, ರೋಹಿತ್ ಹೆಗ್ಡೆ ಎರ್ಮಾಳ್, ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article