ಯುವಜನರ ಕಣ್ಮಣಿಯಾಗಿದ್ದ ಸಂಗಾತಿ ಸತೀಶ್ ಕುಲಾಲ್ ಇನ್ನಿಲ್ಲ
ಕಳೆದ ಒಂದು ವಾರಗಳ ಹಿಂದೆ ತನ್ನ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ 5ನೇ ಮಹಡಿಯಿಂದ ಕೆಳಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಕೊನೆಗೂ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರು.
ಸತೀಶ್ ಕುಲಾಲ್ ಅವರು ಎಲ್ಲರ ಜೊತೆ ಬೆರೆತು ಬಾಳಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ಊರಿನಲ್ಲೇ ಅಜಾತಶತ್ರು ಎಣಿಸಿಕೊಂಡಿದ್ದರು.
ಬಡವರ ಕಾರ್ಮಿಕರ ಶೋಷಿತರ ಬಗ್ಗೆ ಸದಾ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ಸತೀಶ್ ಅವರ ಈ ಗುಣಕ್ಕೆ ಜನ್ಮ ನೀಡಿದ ತಂದೆಯಾದ, ಬಜಾಲ್ ಪರಿಸರದಲ್ಲಿ ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರಾಗಿದ್ದ ಕಾಂ ಶೀನ ಬಂಗೇರರವರೇ ಪ್ರೇರಣೆಯಾಗಿದ್ದರು.
60 ವರ್ಷಗಳ ಹಿಂದೆ ಬಜಾಲ್ ಪರಿಸರದಲ್ಲಿ ತಾಲೀಮು ನಡೆಸುವ ಮೂಲಕ ದೈಹಿಕ ತರಬೇತಿಯನ್ನು ನಡೆಸಿ ಯುವಕರನ್ನು ಸಧೃಢವಾಗಿ ಬೆಳೆಸಬೇಕೆಂಬ ಇರಾದೆಯಿಂದ ಜನ್ಮತಾಳಿದ ಜನತಾ ವ್ಯಾಯಾಮ ಶಾಲೆಗೆ ಸ್ವಂತ ನೆಲೆ ಇದ್ದಿರಲಿಲ್ಲ. ಆಗ ಸ್ವಯಂಪ್ರೇರಣೆಯಿಂದ ಮುಂದೆ ಬಂದ ಕಾಂ.ಶೀನ ಬಂಗೇರರವರು ತಾನು ಕಷ್ಟದಲ್ಲಿದ್ದರೂ ತನ್ನ ಮನೆಯ ದೊಡ್ಡ ಕೋಣೆಯನ್ನೇ ಜನತಾ ವ್ಯಾಯಾಮ ಶಾಲೆಗೆ ದಾನವನ್ನಾಗಿ ನೀಡಿದರು.ಇದು ಒಂದೆರಡು ವರ್ಷಗಳಲ್ಲ, ಸುಮಾರು 40 ವರ್ಷಗಳ ಕಾಲ ಉಚಿತವಾಗಿ ನೀಡಿದ ಕಾಂ.ಶೀನ ಬಂಗೇರರವರ ತ್ಯಾಗಕ್ಕೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ.
ಅಂತಹ ತ್ಯಾಗಜೀವಿಯ ಕರುಳಕುಡಿಯಾಗಿ ಬೆಳೆದ ಸಂಗಾತಿ ಸತೀಶ್ ರವರೂ ಕೂಡ ಅದೇ ಜನತಾ ವ್ಯಾಯಾಮ ಶಾಲೆಯಲ್ಲಿ ಬೆಳೆದು ಅದೆಷ್ಟೋ ಯುವಕರಿಗೆ ತಾಲೀಮು ತರಬೇತಿಯನ್ನು ಕೊಟ್ಟು ಬೆಳೆಸಿರುವುದು ಮಾತ್ರವಲ್ಲ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿ ಯುವಜನರ ಪ್ರೀತಿಗೆ ಪಾತ್ರರಾಗಿದ್ದರು.
ಸದಾ ಹಾಸ್ಯ ಪ್ರವೃತ್ತಿಯ ಸತೀಶ್ ಅವರು ತನ್ನ ನೋವು ಎಷ್ಟೇ ಇದ್ದರೂ ಇತರರನ್ನು ನಗಿಸುತ್ತಾ ಎಲ್ಲರ ಹೃದಯ ಗೆದ್ದಿದ್ದರು. ಇಂತಹ ಸಂಗಾತಿ ಇನ್ನಿಲ್ಲ ಎನ್ನುವುದು ಒಂದು ಕ್ಷಣನೂ ಊಹಿಸಲು ಸಾಧ್ಯವಿಲ್ಲ ಎಂದು ಸಮಾಜಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಸಂತಾಪ ಸೂಚಿಸಿದ್ದಾರೆ.