ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದರೆ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ ಸೂಚನೆ

ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದರೆ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ ಸೂಚನೆ


ಮಂಗಳೂರು: ಹದಿನೆಂಟು ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರು ಅಥವಾ ಕಿಶೋರ ಕಾರ್ಮಿಕರನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸಲು ಮಹಾನಗರಪಾಲಿಕೆ  ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.

ಅವರು  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ  ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆ, ಜಿಲ್ಲಾ ಮಟ್ಟದ  ಟಾಸ್ಕ್ ಫೋರ್ಸ್  ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆ ವತಿಯಿಂದ  ಬಾಲಕಾರ್ಮಿಕರು ಅಥವಾ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ, ಬಾಲಕಾರ್ಮಿಕ ನಿಷೇಧದ ಬಗ್ಗೆ ಲೋಗೋವನ್ನು ರಚಿಸಿ  ಎಲ್ಲಾ ಸಂಸ್ಥೆಗಳಲ್ಲಿ ಸಾರ್ವಜನಿಕವಾಗಿ  ಪ್ರದರ್ಶಿಸಲು ಕ್ರಮ ಕೈಗೊಳ್ಳುವಂತೆ  ಅವರು ಸೂಚಿಸಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಮತ್ತು ಪುನರ್ವಸತಿ ಸಮಿತಿ ಸಭೆ ಹಾಗೂ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸಬೇಕು.

ಎಲ್ಲಾ ಕಾರ್ಖಾನೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯ ಸಾರಾಂಶವನ್ನು ಕಡ್ಡಾಯವಾಗಿ ಪ್ರದರ್ಶಿಸಲು  ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಚೈಲ್ಡ್ ಹೆಲ್ಸ್ ಲೈನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಸ್ಟೆಲ್, ಕಾಲೊನಿ ಮತ್ತು ಕಾಲೇಜುಗಳಲ್ಲಿ ಜನಜಾಗೃತಿ, ಕಾನೂನು ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯ ಸಾರಾಂಶವನ್ನು ಪ್ರದರ್ಶಿಸದ  84 ಸಂಸ್ಥೆಗಳಿಗೆ ಮೊಕದ್ದಮೆ ಹೂಡಲಾಗಿದ್ದು, 22 ಸಂಸ್ಥೆಗಳಿಗೆ ರೂ. 1,64000 ದಂಡ ಸಂಗ್ರಹವಾಗಿದೆ. 62 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article