ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆಗಳು ಕಡ್ಡಾಯವಾಗಿ ನಡೆಸಬೇಕು: ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚನೆ
ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಸೇರಿ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಸಕ್ರಿಯವಾಗಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆಗಳು ನಡೆಯುವಂತೆ ಕ್ರಮವಹಿಸಿ ಸಭೆಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾಣೆಯಾದ ಪ್ರಕರಣಗಳು, ಶಾಲೆಯಿಂದ ಹೊರಗುಳಿಯುವಿಕೆ, ಬಾಲಕಾರ್ಮಿಕತೆ, ಬಾಲ್ಯವಿವಾಹಗಳ ಬಗ್ಗೆ ಚರ್ಚಿಸಿ ತಾಲೂಕು ಸಮಿತಿಗೆ ಮಾಹಿತಿ ನೀಡಬೇಕು ಎಂದ ಅವರು ಹೇಳಿದರು.
ಬಾಲ ಗರ್ಭಿಣಿ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಪಂಚಾಯತ್ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕಾವಲು ಸಮಿತಿ ಸಭೆ ನಡೆಸಬೇಕು ಎಂದು ಅವರು ಹೇಳಿದರು. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಜನಜಾಗೃತಿ ಮೂಡಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಒಟ್ಟು 39 ಪ್ರಕರಣಗಳು ದಾಖಲಾಗಿದೆ. ಮಹಿಳೆಯರ ಮತ್ತು ಮಕ್ಕಳ ಮಾರಾಟ/ ಸಾಗಾಟ/ ಕಾಣೆಯಾದ ಪ್ರಕರಣಗಳಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿರುವ ಪೈಕಿ 33 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.