ಧನು ಪೂಜೆಗೆ ಹೋದ ಬಾಲಕ ನಿಗೂಢ ಸಾವು
ಮೃತ ಬಾಲಕನನ್ನು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದು ಗುರುತಿಸಲಾಗಿದೆ.
ಪ್ರತಿದಿನ ಸ್ನೇಹಿತರ ಜತೆ ಧನು ಪೂಜೆಗೆ ತೆರಳುತ್ತಿದ್ದ, ಇಂದು ಬಾರದೆ ಇರುವ ಕುರಿತು ಸ್ನೇಹಿತರಿಂದ ಮಾಹಿತಿ ಬಂದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹುಡುಕಾಟಕ್ಕಿಳಿದಾಗ ಬಾಲಕ ತೆರಳಿದ ಪ್ರದೇಶದ ತೋಟದ ಬಾವಿಯ ಬದಿಯಲ್ಲಿ ರಕ್ತದ ಕಲೆಗಳು ಕಾಣಿಸಿವೆ.ಚಿರತೆಗಳ ಓಡಾಟ ಇರುವುದರಿಂದ ಆತಂಕ ಸೃಷ್ಟಿಯಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.
ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸುವ ವೇಳಿ ಬಾವಿಯಲ್ಲಿ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಾಪತ್ತೆಯಾದ ವಿಚಾರ ತಿಳಿದು ಗ್ರಾಮದ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ’ಹುಡುಗ ವಾರಕ್ಕೊಮ್ಮೆ ಬೆಳ್ಳಂ ಬೆಳಗ್ಗೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸವಿದ್ದು ಅದೇ ರೀತಿ ಈ ದಿನ ಬೆಳಗ್ಗೆ 5 ಗಂಟೆಗೆ ಮನೆಯಿಂದ ತೆರಳಿದ್ದು ವಾಪಸ್ ಮನೆಗೆ ಬರದೇ ಇದ್ದಾಗ ಹುಡುಕಾಟ ನಡೆಸುವ ವೇಳೆ ಮನೆಯಿಂದ 500 ಮೀಟರ್ ದೂರದಲ್ಲಿ ಇರುವ ಬಾವಿಯಲ್ಲಿ ಶವ ಪತ್ತೆಯಾಗಿದೆ. ಮೃತದೇಹದ ಮೇಲೆ ಕೆಲವು ಗಾಯಗಳಿದ್ದು, ಆ ಗಾಯಗಳು ಹೇಗೆ ಆಗಿವೆ ಎಂಬ ಕಾರಣವು ಮರಣೋತ್ತರ ವರದಿ ಬಂದ ನಂತರ ಸ್ಪಷ್ಟವಾಗುತ್ತದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.