ಬೀಜ ಮಸೂದೆ, ವಿದ್ಯುತ್ ಮಸೂದೆಗಳು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳಿಗೆ ಮಾರಕ: ಕೆ. ಯಾದವ ಶೆಟ್ಟಿ

ಬೀಜ ಮಸೂದೆ, ವಿದ್ಯುತ್ ಮಸೂದೆಗಳು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳಿಗೆ ಮಾರಕ: ಕೆ. ಯಾದವ ಶೆಟ್ಟಿ


ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ಮಾಡಲು ಹೊರಟ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಯ ಉದ್ದೇಶಗಳನ್ನೇ ಬುಡಮೇಲುಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನೇ ಪ್ರದಾನವನ್ನಾಗಿಟ್ಟುಕೊಂಡು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ.ಇವುಗಳ ವಿರುದ್ಧ ದೇಶದ ಸಮಸ್ತ ಜನಕೋಟಿ ಒಂದಾಗಿ ಹೋರಾಡದಿದ್ದರೆ ದೇಶವನ್ನೇ ಉಳಿಸುವುದು ಕಷ್ಟಸಾದ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕ ಕೆ. ಯಾದವ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.


ಅವರು ಬೀಜ ಮಸೂದೆ ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಇಂದು ದೇಶಾದ್ಯಂತ ರೈತ ಕಾರ್ಮಿಕರ ಸಖ್ಯತೆಯಲ್ಲಿ ಪ್ರತಿರೋಧ ದಿನಾಚರಣೆ ನಡೆಸಬೇಕೆಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.


ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು.


ಪ್ರತಿಭಟನೆಯನ್ನುದ್ದೇಶಿಸಿ AITUC  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ಈಗಾಗಲೇ ಹಲವು ಬೀಜ ಕಂಪೆನಿಗಳು ನೀಡಿದ ಕಳಪೆ ಗುಣಮಟ್ಟದ ಬೀಜದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಬೆಳೆನಷ್ಟ ಪರಿಹಾರಗಳು ಸಿಕ್ಕಿಲ್ಲ.ಬೀಜ ಮಸೂದೆಯಲ್ಲಿ ಮುಂದೆಯೂ ಅದಕ್ಕೆ ಅವಕಾಶವಿಲ್ಲವಾಗಿದೆ. ಒಟ್ಟಿನಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸಾರ್ವಜನಿಕ ವಲಯದಲ್ಲಿರುವ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಫೆಡರಲ್ ಸಂರಚನೆಗೆ ಕೊಡಲಿ ಪೆಟ್ಟು ನೀಡಿದೆ.ಗೃಹ ಬಳಕೆ ಹಾಗೂ ಕೃಷಿ ಬಳಕೆಗೆ ಖಾಸಗಿ ಕಂಪೆನಿಗಳು ವಿಪರೀತವಾಗಿ ನಿಗದಿಪಡಿಸಿದ ದರಗಳನ್ನೇ ಪಾವತಿಸಬೇಕಾಗಿದೆ.  ಮುಂದಿನ 5 ವರ್ಷಗಳಲ್ಲಿ ಸಬ್ಸಿಡಿಗಳನ್ನು ಕೈಬಿಡಲಾಗುತ್ತದೆ. ಸ್ಮಾರ್ಟ್ ಮೀಟರ್ ಅಳವಡಿಕೆಯ ಮೂಲಕ ಮುಂಗಡವಾಗಿ ಹಣ ಪಾವತಿಸಿ ಖಾಸಗಿ ಕಂಪೆನಿಗಳಿಗೆ ಮತ್ತಷ್ಟು ಲಾಭ ಮಾಡುವ ದುರುದ್ದೇಶ ಈ ಯೋಜನೆಯ ಹಿಂದಿದೆ ಎಂದು ಹೇಳಿದರು.

CITU ಜಿಲ್ಲಾಧ್ಯಕ್ಷ ಬಿ‌.ಎಂ. ಭಟ್ ಮಾತನಾಡಿ, ಗ್ರಾಮೀಣ ಜನತೆಯ ಬದುಕಿಗೆ ಪೂರಕವಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡುವ ಮೂಲಕ ಇಡೀ ಯೋಜನೆಯನ್ನು ಕತ್ತು ಹಿಸುಕಿ ಸಾಯಿಸಲು ಹೊರಟಿದೆ.ತನ್ನ ಜವಾಬ್ದಾರಿಯ ಅನುದಾನದ ಹಣವನ್ನು ರಾಜ್ಯ ಸರಕಾರದ ತಲೆಗೆ ಕಟ್ಟಿ ಯೋಜನೆಯನ್ನು ಮುಂದುವರಿಯದಂತೆ ತಡೆಗಟ್ಟುವುದೇ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ AITUC ಜಿಲ್ಲಾ ನಾಯಕರಾದ ಬಿ. ಶೇಖರ್ ಬಂಟ್ವಾಳ, ವಿ. ಕುಕ್ಯಾನ್, ಎಚ್.ವಿ. ರಾವ್,ಸುರೇಶ್ ಕುಮಾರ್ ಬಂಟ್ವಾಳ, ಗೀತಾ ಸುವರ್ಣ ಬಜಾಲ್, ಸಂಜೀವಿ ಹಳೆಯಂಗಡಿ, ಮೀನಾಕ್ಷಿ ಬಜಪೆ, ಕೃಷ್ಣಪ್ಪ ವಾಮಂಜೂರು, ಸುಧಾಕರ ಕಲ್ಲೂರು,  CITU ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಬಿ.ಕೆ. ಇಮ್ತಿಯಾಜ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಈಶ್ವರೀ ಬೆಳ್ತಂಗಡಿ, ಜಯಂತಿ ಶೆಟ್ಟಿ, ಜಯಲಕ್ಷ್ಮಿ, ಪ್ರಮೋದಿನಿ, ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ವಿಮಾ ನೌಕರರ ಸಂಘಟನೆಯ ಬಿ.ಎನ್. ದೇವಾಡಿಗ, ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮುಂತಾದವರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article