ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ರಾಷ್ಟ್ರೀಯ ಪ್ರತಿಷ್ಠಿತ ಸ್ಕಾಚ್’ ಪ್ರಶಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ರಾಷ್ಟ್ರೀಯ ಪ್ರತಿಷ್ಠಿತ ಸ್ಕಾಚ್’ ಪ್ರಶಸ್ತಿ


ಮಂಗಳೂರು: ಬ್ಯಾಂಕ್‌ಗಳ ಬಿ.ಸಿ.(ವ್ಯವಹಾರ ಪ್ರತಿನಿಧಿ)ಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳನ್ನು ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಸಬಲೀಕರಣಕ್ಕಾಗಿ ವೈವಿಧ್ಯಮಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುವಲ್ಲಿ ಶ್ರೇಷ್ಠ ಸಾಧನೆಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ಸ್ಕಾಚ್ ಗ್ರೂಫ್ಸ್’ನಿಂದ ಕೊಡಮಾಡುವ 2025ನೇ ಸಾಲಿನ ರಾಷ್ಟ್ರದ ಪ್ರತಿಷ್ಠಿತ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’ ಲಭಿಸಿದೆ.

ದೆಹಲಿಯ ಹೆಬಿಟೆಟ್ ಸೆಂಟರ್ ಸಭಾಭವನದಲ್ಲಿ ಜ.10 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮತ್ತು ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್. ಪೈ ಅವರು ಸ್ಕಾಚ್ ಗ್ರೂಫ್ಸ್‌ನ ಮುಖ್ಯಸ್ಥ ಸಮೀರ್ ಕೋಚ್ಚಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದ ಫಲವಾಗಿ ಇಂದು ರಾಜ್ಯದ 53 ಲಕ್ಷಕ್ಕೂ ಅಧಿಕ ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯವಾಹಿನಿಗೆ ಬಂದಿವೆ. ಈ ಪ್ರಶಸ್ತಿಯು ಸಂಸ್ಥೆಯ ಸಂಸ್ಥಾಪಕರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಹೇಮಾವತಿ ವೀ.ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.

ಬಡವರಿಗೆ ದಾನದ ಬದಲಿಗೆ ಸ್ವಾವಲಂಬನೆಯ ಬೀಜಮಂತ್ರವನ್ನು ಬಿತ್ತಿ, ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಗೆ ಬಡವರನ್ನು ತರಲು ಪ್ರಯತ್ನಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯಪೂರ್ವ ಕಾರ್ಯದಲ್ಲಿ ತೊಡಗಿಕೊಂಡಿದ್ದು, 6,20,000ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿದೆ. ಕಳೆದ ವರ್ಷಾಂತ್ಯದಲ್ಲಿ ಸ್ವಸಹಾಯ ಸಂಘಗಳ ಹೊರಬಾಕಿ ಮೊತ್ತ 26,304 ಕೋಟಿ ರೂ. ಚಾಲ್ತಿ ಇರುತ್ತದೆ. ದೇಶದ ಆರು ಪ್ರಮುಖ ಬ್ಯಾಂಕ್‌ಗಳಿಗೆ ಬಿ.ಸಿ. (ವ್ಯವಹಾರ ಪ್ರತಿನಿಧಿ) ಸಂಸ್ಥೆಯಾಗಿ ಅತೀ ಕಡಿಮೆ ಬಡ್ಡಿದರ ಅಂದರೆ ಬ್ಯಾಂಕಿನಿಂದ ಶೇ.14 ರಿಂದ ಶೇ.15 ವಾರ್ಷಿಕ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಾಲ ಸೌಲಭ್ಯ ದೊರೆಯುತ್ತಿದ್ದು, ಇಲ್ಲಿ ಕಡಿತ ಬಡ್ಡಿದರದ ವ್ಯವಸ್ಥೆ ಇರುವುದರಿಂದ ಮತ್ತು ವಾರದ ಮರುಪಾವತಿಯಿಂದಾಗಿ ಅತೀ ಕಡಿಮೆ ಬಡ್ಡಿ ವಿಧಿಸಿದಂತಾಗುವುದು ಎಂದು ಹೇಳಿದರು.

1 ಲಕ್ಷ ರೂ. ಸಾಲಕ್ಕೆ 50 ವಾರ(ಒಂದು ವರ್ಷದ ಅವಧಿಗೆ)ಗಳಿಗೆ 2,146 ರೂ. ವಾರದ ಕಂತು ಆಗಿದ್ದು, ಇದರನ್ವಯ 1 ಲಕ್ಷಕ್ಕೆ ಒಂದು ವರ್ಷಕ್ಕೆ ಒಟ್ಟು ಪಾವತಿಸುವ ಬಡ್ಡಿ ಕೇವಲ 7,246 ರೂ. ಆಗಿರುತ್ತದೆ. ಇದು ಅತ್ಯಂತ ಕಡಿಮೆ ಬಡ್ಡಿದರದ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಯಾವುದೇ ಆಸ್ತಿಗಳನ್ನು ಆಡಮಾನವಾಗಿ ಇಡಬೇಕಾಗಿಲ್ಲ. ಮೂರನೇ ವ್ಯಕ್ತಿಯ ಗ್ಯಾರೆಂಟಿ ಬೇಕಾಗಿಲ್ಲ ಎಂದರು.

ಅದ್ಯಾವುದರ ಅಗತ್ಯವಿಲ್ಲದೆ ಸುಲಭವಾಗಿ ತಮ್ಮ ಗ್ರಾಮದ ಪ್ರದೇಶದಲ್ಲೆ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದು ಆರ್ಥಿಕ ಸೇರ್ಪಡೆಯ ಅತಿ ದೊಡ್ಡ ವರದಾನವಾಗಿದೆ. ಇದೊಂದು ಹಳ್ಳಿ ಹಳ್ಳಿಗೂ ಬ್ಯಾಂಕಿನಿಂದ ನೇರ ಸಾಲ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಮೂಲಕ ದೊರಕಿಸಿಕೊಡುವ ದೇಶದ ಅತ್ಯುತ್ತಮವಾದ ವ್ಯವಸ್ಥೆಯಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘದ ಮಾದರಿ ಆಯಾಮದಲ್ಲಿ ಬ್ಯಾಂಕ್‌ಗಳಿಂದ ಆರ್ಥಿಕ ಸಾಲ ಸೌಲಭ್ಯವನ್ನು ಇಷ್ಟೊಂದು ತಳಮಟ್ಟದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ದೊರಕಿಸಿಕೊಟ್ಟಿರುವುದು ಆರ್ಥಿಕ ಸೇರ್ಪಡೆಯ ಬಹುದೊಡ್ಡ ಸಾಧನೆಯಾಗಿರುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ಆರ್ಥಿಕ ಸೇರ್ಪಡೆಯಲ್ಲಿ ವಿಶಿಷ್ಟ ಸಾಧನೆಗೈದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ, ತಮಿಳುನಾಡು ಸರಕಾರ ಮತ್ತು ಇತರ ಇಲಾಖೆ ಮತ್ತು ಸಂಸ್ಥೆಗಳನ್ನು ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article