ಧರ್ಮಸ್ಥಳ ಪ್ರಕರಣ: ಆಸ್ಥಿಪಂಜರ ಎಫ್‌ಎಸ್‌ಎಲ್‌ಗೆ ರವಾನೆ
ಮಂಗಳೂರು: ಧರ್ಮಸ್ಥಳ ಗ್ರಾಮದ ಸಾಮೂಹಿಕ ಶವ ದಫನ ಪ್ರಕರಣದಲ್ಲಿ ತನಿಖೆ ನಡೆಸುತ್ತಿರವ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿನಲ್ಲಿ ಪತ್ತೆಯಾದ ಏಳು ಅಸ್ಥಿಪಂಜರಗಳನ್ನು ವಿಧಿವಿಜ್ಞಾನ ಪ್ರಯೋಗಕ್ಕಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಮಂಗಳವಾರ ಕಳುಹಿಸಿದ್ದಾರೆ.
ಸೌಜನ್ಯಾ ಮಾವ ವಿಠಲ ಗೌಡ ನೀಡಿದ ದೂರಿನಂತೆ 2025ರ ಸೆ.17, 18ರಂದು ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಸಂದರ್ಭ ಪತ್ತೆಯಾದ ಅಸ್ಥಿಪಂಜರಗಳನ್ನು ಸುರಕ್ಷಿತವಾಗಿ ಇರಿಸಲಾಗಿತ್ತು. ಐದು ತಿಂಗಳ ಬಳಿಕ ಅಸ್ಥಿಪಂಜರದ ಪೂರ್ವಾಪರ ತಿಳಿಯಲು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.
ಬೆಳ್ತಂಗಡಿ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಸೆ.17ರಂದು ಐದು ಮತ್ತು ಸೆ.18ರಂದು ಎರಡು ಸೇರಿ ಒಟ್ಟು ಏಳು ಅಸ್ಥಿಪಂಜರಗಳನ್ನು ವಶಪಡಿಸಿಕೊಡಿದ್ದರು. ಜ.20ರಂದು ಬೆಳಗ್ಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಲ್ಲಿರುವ ಎಫ್‌ಎಸ್‌ಎಲ್ ಕಚೇರಿಗೆ ರವಾನೆ ಮಾಡಲಾಗಿದೆ.
ಬಂಗ್ಲೆಗುಡ್ಡೆ ಕಾಡಿನಲ್ಲಿ ನೂರಾರು ಅಸ್ಥಿಪಂಜರಗಳಿವೆ ಎಂದು ಸೌಜನ್ಯಾ ಮಾವ ವಿಠಲ ಗೌಡ ಹೇಳಿಕೆ ನೀಡಿದ್ದರು. ಎಸ್‌ಐಟಿ ಈ ಬಗ್ಗೆ ಯಾವುದೇ ಶೋಧ ನಡೆಸುತ್ತಿಲ್ಲ ಎಂದು ಪುರಂದರ ಗೌಡ ಎಂಬವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಉತ್ತರ ನೀಡುವಂತೆ ಸೂಚಿಸಿದ್ದು ಬಳಿಕ ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿತ್ತು. ಇದರಂತೆ ಎಸ್‌ಐಟಿ ವಿಠಲ ಗೌಡ ಉಪಸ್ಥಿತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಪ್ರಕರಣದ ಮೂಲ ದೂರುದಾರ, ಸಾಕ್ಷಿದಾರ ಚಿನ್ನಯ್ಯನ ಅನುಪಸ್ಥಿತಿಯಲ್ಲಿ ಈ ಶೋಧ ಕಾರ್ಯ ನಡೆದಿತ್ತು. ಈ ಸಂದರ್ಭ ನೆಲ ಅಗೆದು ಶೋಧ ನಡೆಸಿರಲಿಲ್ಲ. ನೆಲದ ಮೇಲ್ಮೈನಲ್ಲಿ ಇರಿಸಿದ್ದ ಮಾನವ ತಲೆಬುರುಡೆ, ಎಲುಬಿನ ಚೂರುಗಳನ್ನು ಸಂಗ್ರಹಿಸಲಾಗಿತ್ತು. ಚಿನ್ನಯ್ಯ ನೀಡಿದ ದೂರಿನಂತೆ, ಜು.೨೮ರಿಂದ ಆ.೧೩ರ ವರೆಗೆ ಸುಮಾರು 17 ಕಡೆ ಅಗೆದಿದ್ದ ಎಸ್‌ಐಟಿಗೆ ಚಿನ್ನಯ್ಯ ಹೇಳಿದಷ್ಟು ಪ್ರಮಾಣದ ಅಸ್ಥಿಪಂಜರ ಸಿಕ್ಕಿರಲಿಲ್ಲ.