ಶಾಸಕಿಯ ನಿಂದನೆ: ಮಹಿಳಾ ಮೋರ್ಚಾ ಎಸ್ಪಿಗೆ ದೂರು
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಹಾಗೂ ಅವಹೇಳನಕಾರಿ ಬರಹಗಳನ್ನು ಹರಡಿ ಸಮಾಜದಲ್ಲಿ ದ್ವೇಷ ಮತ್ತು ವೈರತ್ವ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಬಿಜೆಪಿ ಮಹಿಳಾ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಫೇಸ್ಬುಕ್ನ Billava Sandesh ಎಂಬ ಪೇಜ್ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಚಿತ್ರವನ್ನು ಬಳಸಿಕೊಂಡು, ಅವರು ದಲಿತ ಸಮುದಾಯದ ಪರ ನಿಲ್ಲಲಿಲ್ಲ ಎಂಬ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಶಾಸಕಿ ನಿಧನರಾದಂತೆ ತೋರಿಸುವ ಭಾವಪೂರ್ಣ ಶ್ರದ್ಧಾಂಜಲಿ ಸಂದೇಶಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆದು ವರ್ಗಗಳ ಮಧ್ಯೆ ದ್ವೇಷ ಹುಟ್ಟಿಸುವ ಪ್ರಯತ್ನ ನಡೆದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಜನಪ್ರತಿನಿಧಿಯಾದ ಶಾಸಕಿ ಭಾಗೀರಥಿ ಮುರುಳ್ಯ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದಲೇ ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗಿದ್ದು, ಇದು ಸಮಾಜದ ಶಾಂತಿಯನ್ನು ಕದಡುವ ಗಂಭೀರ ಕೃತ್ಯವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ.
ಸಂಬಂಧಿತ ಫೇಸ್ಬುಕ್ ಪೇಜ್ನ್ನು ನಿರ್ವಹಿಸುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುನಲ್ಲಿ ಮನವಿ ಮಾಡಲಾಗಿದೆ. ಈ ಕುರಿತು ಅಗತ್ಯ ಸ್ರ್ಕೀನ್ಶಾಟ್ಗಳನ್ನು ಕೂಡ ಲಗತ್ತಿಸಲಾಗಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.