‘ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಆದಿ ದ್ರಾವಿಡ ಸೇವಾ ಸಂಘ ಒತ್ತಾಯ
ಮಂಗಳೂರು: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದ ಆರೋಪಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೇ ಮುತುವರ್ಜಿ ವಹಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಆರೋಪಿಯನ್ನು ಜಿಲ್ಲಾ ಎಸ್ಪಿ ಅವರು ತಕ್ಷಣ ಬಂಧಿಸಬೇಕು ಎಂದು ಜಿಲ್ಲಾ ಆದಿ ದ್ರಾವಿಡ ಸೇವಾ ಸಂಘ ಆಗ್ರಹಿಸಿದೆ.
ಪರಿಶಿಷ್ಟ ಜಾತಿ ಆದಿದ್ರಾವಿಡ ಸಮಾಜದವರಾದ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ತೇಜೋವಧೆ ಮಾಡಿರುವುದು ಖಂಡನೀಯ. ಮಾನವೀಯತೆ ಹಾಗೂ ಮಹಿಳೆ ಎಂಬುದನ್ನು ಮರೆತು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದಿದ್ದು, ಇಡೀ ಸಮಾಜವೇ ತಲೆ ತಗ್ಗಿಸುವ ದುಷ್ಕೃತ್ಯವಾಗಿದೆ. ಸಮಸ್ತ ಆದಿದ್ರಾವಿಡ ಸಮುದಾಯವು ಈ ಕೃತ್ಯವನ್ನು ಖಂಡಿಸುತ್ತದೆ ಎಂದು ಸಂಘದ ಕಾರ್ಯಾಧ್ಯಕ್ಷ ರಾಮ್ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಕರಣವನ್ನು ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರ ಗಮನಕ್ಕೂ ತರಲಾಗುವುದು. ಆರೋಪಿಯ ಹಿಂದೆ ಕಾಣದ ಕೈಗಳ ಕೈವಾಡ ಇರುವ ಸಂಶಯವಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಈ ಪ್ರಕರಣವನ್ನು ತಕ್ಷಣ ಕೈಗೆತ್ತಿಕೊಂಡು ಕಿಡಿಗೇಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಎಸ್ಪಿಯೇ ಹೊಣೆಗಾರರಾಗಿದ್ದು, ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆ ಜತೆಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಘುನಾಥ ಅತ್ತಾವರ, ಜಿಲ್ಲಾ ಅಧ್ಯಕ್ಷ ಸಂಜೀವ ಕೋಟ್ಯಾನ್ ಪಿ., ಕೋಶಾಧಿಕಾರಿ ಈಶ್ವರ ಪರಪಾದೆ, ಉಪಾಧ್ಯಕ್ಷ ಅಣ್ಣು ಕುಂಜತ್ತಬೈಲ್, ತಾಲೂಕು ಅಧ್ಯಕ್ಷ ಪ್ರಶಾಂತ್ ಗಿರಿಧರ್ ಉಪಸ್ಥಿತರಿದ್ದರು.