ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಬಂಧನ
ಮಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಗೌಡ ಅವರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ತಲೆಮರೆಸಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಸೋಮವಾರ ಕರ್ನಾಟಕ-ಕೇರಳ ಗಡಿ ಸಮೀಪ ಕೇರಳ ರಾಜ್ಯ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಇದರ ಬೆನ್ನಿಗೇ ಅವರಿಗೆ ಆಶ್ರಯ ನೀಡಿದ ಮಂಗಳೂರಿನ ಉದ್ಯಮಿ ಮೈಕಲ್ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ತಡರಾತ್ರಿ ಈ ಇಬ್ಬರನ್ನು ಕರೆತಂದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಬಳಿಯ ಅತಿಥಿ ಗೃಹದಲ್ಲಿ ಇರಿಸಲಾಗಿದ್ದು, ಸೋಮವಾರ ಶಿಡ್ಲಘಟ್ಟ ಕೋರ್ಟ್‌ಗೆ ಹಾಜರುಪಡಿಲಾಗಿದೆ.
ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕೇಸು ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿದ್ದರು. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದೇ ವೇಳೆ ರಾಜೀವ್ ಗೌಡ ಮಂಗಳೂರು ಅಥವಾ ಕೇರಳದಲ್ಲಿ ತಲೆಮರೆಸಿರುವ ಬಗ್ಗೆ ಪೊಲೀಸರು ಅನುಮಾನ ಪಟ್ಟಿದ್ದರು. ಕೊನೆಗೂ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ರಾಜೀವ್ ಗೌಡನನ್ನು ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದಾರೆ.
ಕೇಸು ದಾಖಲಾದ ಬಳಿಕ ರಾಜೀವ್ ಗೌಡ ಮಂಗಳೂರಿಗೆ ಆಗಮಿಸಿ ಮಂಗಳೂರಲ್ಲಿ ಮೂರು ದಿನ ತಲೆಮರೆಸಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಚ್ಚ ನಾಡಿಯಲ್ಲಿ ತೋಟ ಹಾಗೂ ಮರದ ಡೈಸೈನ್‌ನ ಫಾರ್ಮ್ ಹೌಸ್ ಹೊಂದಿರುವ ಉದ್ಯಮಿ ಮೈಕಲ್ ತನ್ನ ಮನೆಯಲ್ಲಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದರು. ಪೊಲಿ ಸರ ಕೈಗೆ ಸಿಗದಂತೆ ರಾಜೀವ್ ಗೌಡನನ್ನು ತನ್ನ ವಾಹನದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪಿಸಿ ಅಲ್ಲಿಂದ ಕೇರಳಕ್ಕೆ ಪರಾರಿಯಾಗಲು ಹಣ ಹಾಗೂ ಮೊಬೈಲ್ ನೀಡಿ ರೈಲು ಹತ್ತಿಸಿರುವ ಆರೋಪ ಮೈಕಲ್ ಮೇಲಿದೆ.
ಬಂಧಿತ ರಾಜೀವ್ ಗೌಡ ಮತ್ತು ಮೈಕಲ್ ಇಬ್ಬರನ್ನು ಮಂಗಳವಾರ ಚಿಕ್ಕಬಳ್ಳಾಪುರ ಪೊಲೀಸ್ ಅತಿಥಿಗೃಹದಲ್ಲಿ ಪ್ರತ್ಯೇಕ ವಿಚಾರಣೆ ನಡೆಸಲಾಗಿದೆ.