ತುಳು ಸಾಹಿತ್ಯ ಅನುವಾದ ವ್ಯಾಪಿಸಲಿ: ಪ್ರೊ. ಬಿ.ಎ. ವಿವೇಕ ರೈ
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಇಂಗ್ಲಿಷ್, ಕನ್ನಡ ಹಾಗೂ ತುಳು ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅಮೃತ ಸೋಮೇಶ್ವರ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ಗೋಂದೋಳು ಮತ್ತು ಇತರ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದೇ ಕೃತಿಯ ಅನುವಾದವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪಶ್ಚಿಮ ದೇಶಗಳಲ್ಲಿ ಒಂದು ಪುಸ್ತಕದ 10ರಿಂದ 20 ಬೇರೆ ಬೇರೆ ಮಾದರಿಯ ಅನುವಾದಗಳು ಪ್ರಕಟವಾಗುತ್ತಿವೆ, ನಮ್ಮಲ್ಲಿಯೂ ಅನುವಾದವನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕಿದೆ ಎಂದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿಯೂ ಅನುವಾದ ಕೇಂದ್ರ ಆರಂಭವಾಗಲಿ ಎಂದು ವಿವೇಕ ರೈ ಅವರು ಆಶಯ ವ್ಯಕ್ತಪಡಿಸಿದರು.
ನಮ್ಮನ್ನು ಅಗಲಿರುವ ಹಿರಿಯ ಸಾಹಿತಿ, ಸಾಂಸ್ಕೃತಿಕ ಚೇತನಗಳ ಬರಹವನ್ನು ಓದುವುದು, ತರ್ಜುಮೆ ಮಾಡುವುದು, ಅವರ ನಾಟಕಗಳ ಪ್ರಯೋಗಗಳನ್ನು ಆಗಾಗ್ಗೆ ಮಾಡುವ ಮೂಲಕ ಜನಮಾನಸದಲ್ಲಿ ಹಿರಿಯರ ನೆನಪುಗಳನ್ನು ನಿರಂತರವಾಗಿ ಉಳಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಅವರು ಮಾತನಾಡಿ, ವಿ.ವಿ.ಯಲ್ಲಿ ಈಗಾಗಲೇ ತುಳು ವಿಭಾಗ ಆರಂಭಿಸಲಾಗಿದೆ. ತುಳು ಪೀಠ ಕೂಡ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ಮುದ್ದು ಮೂಡುಬೆಳ್ಳೆ ಅವರು ಅಮೃತರ ನಾಟಕಗಳ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.
ಕಲಾವಿದ ಗೋಪಿ ಅವರು 1994ರಲ್ಲಿ ರಚಿಸಿರುವ ತುಳು ಅಕಾಡೆಮಿಯ ಲಾಂಛನವನ್ನು ಅವರೇ ವರ್ಣಮಯವಾಗಿ ಮರು ವಿನ್ಯಾಸಗೊಳಿಸಿದ್ದು, ಈ ವರ್ಣಮಯ ಲಾಂಛನವನ್ನು ಪ್ರೊ. ವಿವೇಕ ರೈ ಅವರು ಅನಾವರಣಗೊಳಿಸಿದರು.
ಕೃತಿಗಳ ಅನುವಾದಕಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸಿಲ್ವಿಯಾ ರೇಗೊ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಚೇತನ್ ಸೋಮೇಶ್ವರ, ಅಲೋಷಿಯಸ್ ವಿ.ವಿಯ ಭಾಷಾ ನಿಕಾಯದ ಡೀನ್ ಡಾ. ಮಹಾಲಿಂಗ ಭಟ್ ಉಪಸ್ಥಿತರಿದ್ದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಗಳು ಗೊಂದೋಳು ತುಳು ಹಾಡನ್ನು ಪ್ರಸ್ತುತಪಡಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಡಾ. ಮೆಲಿಶಾ ಗೋವಿಯಸ್ ಸ್ವಾಗತಿಸಿ, ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು.